

ಮಂಗಳೂರು, ಮಾ.21 : ಆರ್.ಟಿ.ಐ ಕಾರ್ಯಕರ್ತ ವಿನಾಯಕಾ ಬಾಳಿಗಾ ಹತ್ಯೆ ನಡೆದು ಏಳು ವರ್ಷ ಸಂದಿದೆ. ಆದರೆ ಬಿಜೆಪಿ ಸರಕಾರದ ಒಬ್ಬನೇ ಒಬ್ಬ ಜನಪ್ರತಿನಿಧಿ ಈವರೆಗೂ ಬಾಳಿಗಾ ಮನೆಗೆ ಭೇಟಿ ನೀಡಲಿಲ್ಲ. ಬಾಳಿಗಾ ಸಹೋದರಿಯರಿಗೆ ಧೈರ್ಯ ತುಂಬಲಿಲ್ಲ. ಸರಕಾರದಿಂದ ಕನಿಷ್ಟ ಪರಿಹಾರವನ್ನೂ ಒದಗಿಸಿ ಕೊಡಲಿಲ್ಲ. ಬಿಜೆಪಿ ಸರಕಾರ ತಮ್ಮದೇ ಸಂಘಟನೆಯ ಕಾರ್ಯಕರ್ತ ವಿನಾಯಕ ಬಾಳಿಗಾ ಸಾವಿಗೆ ಯಾಕಾಗಿ ಸ್ಪಂದಿಸಿಲ್ಲ ಎಂದು ಪ್ರೊ. ನರೇಂದ್ರನಾಯಕ್ ಪ್ರಶ್ನೆ ಮಾಡಿದ್ದಾರೆ.
ಬಾಳಿಗಾ ಕೊಲೆ ಪ್ರಕರಣ ನಡೆದು ಮಾ.21ಕ್ಕೆ 7ವರ್ಷ ಸಂದರೂ ನ್ಯಾಯ ಮರೀಚಿಕೆಯಾಗಿರುವುದನ್ನು ಖಂಡಿಸಿ ದೇಶಪ್ರೇಮಿ ಸಂಘಟನೆಗಳ ಒಕ್ಕೂಟದಿಂದ ಮಂಗಳವಾರ ನಗರದಲ್ಲಿ ಕಾಲ್ನಡಿಗೆ ಜಾಥಾ ನಡೆಸಿತು.ನಗರದ ಕಾರ್‌ಸ್ಟ್ರೀಟ್‌ನಲ್ಲಿರುವ ವೆಂಕಟರಮಣ ದೇವಸ್ಥಾನದಿಂದ ಕಲಾಕುಂಜ ಬಳಿಯ ಬಾಳಿಗಾ ಮನೆಯ ವರೆಗೆ ನಡೆದ ಮೆರವಣಿಗೆ, ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಹಿಂದುತ್ವದ ಹೆಸರಲ್ಲಿ ಅಧಿಕಾರಕ್ಕೇರಿದ ಬಿಜೆಪಿ ನಾಯಕರು, ಹಿಂದುಗಳಿಗೆ ಏನೇ ಅನ್ಯಾಯವಾದರೂ ಸಹಿಸೋದಿಲ್ಲ ಎಂದು ರೋಷ ತೋರುತ್ತಾರೆ. ಆದರೆ ಬಾಳಿಗಾ ಸಾವಿಗೆ ನ್ಯಾಯ ಒದಗಿಸಲು ಯಾಕೆ ರೋಷ ಹುಟ್ಟಲಿಲ್ಲ? ಅದೇ ಸಮುದಾಯದ ಸ್ಥಳೀಯ ಶಾಸಕ ವೇದವ್ಯಾಸ ಕಾಮತ್ ಬಾಳಿಗಾ ಮನೆಗೆ ಈವರೆಗೂ ಭೇಟಿ ನೀಡಿಲ್ಲ ಯಾಕೆ ಎಂದು ಪ್ರಶ್ನಿಸಿದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಖ್ಯಾತ ಮನೋವೈದ್ಯರಾದ ಡಾ.ಪಿ.ವಿ.ಭಂಡಾರಿ ‘ವಿನಾಯಕ ಬಾಳಿಗಾರ ಕೊಲೆ ನಡೆದು ಏಳು ವರ್ಷ ಸಂದರೂ ರಾಜ್ಯ ಸರಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಇಂತಹ ಸರಕಾರ ಯಾಕೆ ಬೇಕು? ಇದೊಂದು ನಪುಂಸಕ, ನರಸತ್ತ ಸರಕಾರ. ಸರಕಾರದ ನಿರ್ಲಕ್ಷ್ಯದಿಂದ ನ್ಯಾಯಕ್ಕಾಗಿ ಹೋರಾಡುವವರ ಮೇಲೆ ದಬ್ಬಾಳಿಕೆ, ದೌರ್ಜನ್ಯ ಹೆಚ್ಚಾಗುತ್ತಿದೆ. ಇದರ ವಿರುದ್ಧ ಹೋರಾಟ ತೀವ್ರಗೊಳಿಸುವ ಅಗತ್ಯವಿದೆ ಎಂದರು.

ವಿಚಾರವಾದಿ ಪ್ರೊ. ನರೇಂದ್ರ ನಾಯಕ್, ನಾಗರಿಕ ಸೇವಾ ಟ್ರಸ್ಟ್‌ನ ಸೋಮನಾಥ ನಾಯಕ್, ವಿನಾಯಕ ಬಾಳಿಗಾರ ಸಹೋದರಿಯರಾದ ಹರ್ಷಾ ಬಾಳಿಗಾ, ಅನುರಾಧಾ ಬಾಳಿಗಾ, ಮಾಜಿ ಉಪಮೇಯರ್ ಮುಹಮ್ಮದ್ ಕುಂಜತ್ತಬೈಲ್, ಪ್ರಮುಖರಾದ ಎಂ. ದೇವದಾಸ್, ವಾಸುದೇವ ಉಚ್ಚಿಲ್, ಸುನಿಲ್ ಬಜಿಲಕೇರಿ, ಸುನೀಲ್ ಕುಮಾರ್ ಬಜಾಲ್, ಬಿ.ಕೆ. ಇಮ್ತಿಯಾಝ್, ಮಂಜುಳಾ ನಾಯಕ್, ಪ್ರಕಾಶ್ ಸಾಲ್ಯಾನ್, ವಹಾಬ್ ಕುದ್ರೋಳಿ, ಸಂಜನಾ ಚಲವಾದಿ, ನಿತಿನ್ ಕುತ್ತಾರ್, ರಘು ಎಕ್ಕಾರ್, ರೇವಂತ್ ಕದ್ರಿ, ಜೆರಾಲ್ಡ್ ಟವರ್, ಮತ್ತಿತರರು ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು. ಡಿವೈಎಫ್‌ಐ ದ.ಕ.ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಮುಂತಾದವರು ಉಪಸ್ಥಿತರಿದ್ದರು.
