

ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿ (Delhi) ಹಾಗೂ ಸಮೀಪದ ನಗರಗಳಲ್ಲಿ ಮಂಗಳವಾರ ರಾತ್ರಿ ಪ್ರಬಲ ಭೂಕಂಪ (Earthquake) ಸಂಭವಿಸಿದೆ. ರಾತ್ರಿ 10.20 ರ ಸುಮಾರಿಗೆ ಭೂಕಂಪನದ ಅನುಭವವಾಗಿದ್ದು, ಸುಮಾರು ನಿಮಿಷದ ವರೆಗೆ ಭೂಮಿ ಬಲವಾಗಿ ಕಂಪಿಸಿದೆ. ಅಫ್ಘಾನಿಸ್ತಾನದಲ್ಲಿ ಸಂಜೆ ಭೂಕಂಪ ಸಂಭವಿಸಿತ್ತು. ಅದಾದ ನಂತರ ರಾತ್ರಿ ಉತ್ತರ ಭಾರತದ (North India) ಹಲವು ರಾಜ್ಯಗಳಲ್ಲಿ ಭೂಕಂಪನದ ಅನುಭವವಾಗಿದೆ. ಜನರು ಭೀತಿಯಿಂದ ತಮ್ಮ ಮನೆಗಳಿಂದ ಹೊರಗೋಡಿ ಬರುತ್ತಿರುವ ದೃಶ್ಯಗಳುಳ್ಳ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿವೆ. ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿಯೂ ಭೂಮಿ ಕಂಪನಿಸಿದೆ. ಉತ್ತರ ಪ್ರದೇಶದ ಗಾಜಿಯಾಬಾದ್, ವಸುಂಧರಾ ಸೇರಿದಂತೆ ಹಲವು ಕಡೆಗಳಲ್ಲಿಯೂ ಭೂಮಿ ಕಂಪಿಸಿದೆ. ಆತಂಕಗೊಂಡ ಜನರು ಮನೆಗಳಿಂದ ಹೊರಗೋಡಿ ಬಂದಿದ್ದಾರೆ.

ಅದೃಷ್ಟವಶಾತ್, ಭೂಕಂಪದಿಂದಾಗಿ ಸಾವು-ನೋವು ಸಂಭವಿಸಿದ ಬಗ್ಗೆ ಈವರೆಗೆ ತಿಳಿದುಬಂದಿಲ್ಲ. ಪಂಜಾಬ್, ಹರಿಯಾಣ ಮತ್ತು ಚಂಡೀಗಢಗಳಲ್ಲಿಯೂ ಭೂಮಿ ಕಂಪಿಸಿದ ಬಗ್ಗೆ ವರದಿಯಾಗಿದೆ. ಅಂದಾಜು 7.7 ತೀವ್ರತೆಯ ಭೂಕಂಪ ಇದಾಗಿದೆ.

ವರದಿಗಳ ಪ್ರಕಾರ, ತುರ್ಕಮೆನಿಸ್ತಾನ, ಕಜಕಿಸ್ತಾನ, ಪಾಕಿಸ್ತಾನ, ತಜಕಿಸ್ತಾನ, ಉಜ್ಬೇಕಿಸ್ತಾನ, ಚೀನಾ, ಮತ್ತು ಕಿರ್ಗಿಸ್ತಾನ್ ದೇಶಗಳಲ್ಲಿಯೂ ಭೂಕಂಪ ಸಂಭವಿಸಿದೆ. ಪಾಕಿಸ್ತಾನದ ವಿವಿಧ ನಗರಗಳಲ್ಲಿ ಕಂಪನದ ಅನುಭವವಾಗಿದೆ. ಭೂಕಂಪದ ಕೇಂದ್ರಬಿಂದು ಅಫ್ಘಾನಿಸ್ತಾನದ ಕಲಾಫ್ಗಾನ್ನಿಂದ 90 ಕಿ.ಮೀ ದೂರದಲ್ಲಿತ್ತು ಎನ್ನಲಾಗಿದೆ.
ದೆಹಲಿಯಲ್ಲಿ ವಾಲಿದ ಕಟ್ಟಡಗಳು
ಪ್ರಬಲ ಕಂಪನದಿಂದಾಗಿ ದೆಹಲಿಯ ಶಕರ್ಪುರ ಮತ್ತು ಮೆಟ್ರೋ ಪಿಲ್ಲರ್ ನಂ. 51 ರ ಮುಂಭಾಗದಲ್ಲಿರುವ ಕಟ್ಟಡವು ಬಾಗಿದೆ. ಭೂಕಂಪದ ತೀವ್ರತೆ ಹೆಚ್ಚಾಗಿದ್ದು, ದೀರ್ಘಕಾಲದವರೆಗೆ ಕಂಪನದ ಅನುಭವವಾಗಿದೆ. ಇದರಿಂದ ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು, ಜನರು ತಮ್ಮ ಮನೆ ಮತ್ತು ಕಟ್ಟಡಗಳಿಂದ ಹೊರಬಂದು ಜಮಾಯಿಸಿದರು ಎಂದು ದೆಹಲಿ ನಿವಾಸಿಗಳು ತಿಳಿಸಿದ್ದಾರೆ.