

ವಿಟ್ಲ: ಬಿಜೆಪಿಯ ಭರವಸೆಗಳ ಹಿಂದೆ ಹೋದ ಜನರಿಗೆ ಸರಿಯಾದ ವಿಚಾರ ತಿಳಿಯುತ್ತಿದೆ. ಸಿದ್ಧರಾಮಯ್ಯ ಸರ್ಕಾರ ಇದ್ದ ಸಂದರ್ಭದಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಅದ್ಭುತ ಕೆಲಸಗಳಾಗಿದೆ. ಕಾಂಗ್ರೆಸ್ ಪಕ್ಷ ನೀಡಿದ ಭರವಸೆ ಶೇ.97ರಷ್ಟನ್ನು ಅಧಿಕಾರಕ್ಕೆ ಬಂದಾಗ ಪೂರೈಸುವ ಕಾರ್ಯವನ್ನು ಮಾಡಿದೆ. ಯಾವುದೇ ತಪ್ಪು ಕೆಲಸವನ್ನು ಮಾಡದ ನನಗೆ ಜನರು ಇನ್ನೊಂದು ಅವಕಾಶವನ್ನು ನೀಡಬೇಕು ಎಂದು ಮಾಜಿ ಸಚಿವ ಬಿ. ರಮಾನಾಥ ರೈ (Ramanath Rai) ಹೇಳಿದರು.

ಅವರು ಶನಿವಾರ ರಾತ್ರಿ ಕನ್ಯಾನದ ಪೇಟೆಯಲ್ಲಿ ಸಾಲೆತ್ತೂರು, ಕರೋಪಾಡಿ, ಕನ್ಯಾನ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆಯಲಿರುವ ಬಂಟ್ವಾಳ ಪ್ರಜಾಧ್ವನಿ ಯಾತ್ರೆಯ ಸಮಾರಂಭದಲ್ಲಿ ಮಾತನಾಡಿದರು.
2017ರಲ್ಲಿ ಬಂಟ್ವಾಳದಲ್ಲಿ ಒಳಚರಂಡಿ ವ್ಯವಸ್ಥೆಗಾಗಿ 56 ಕೋಟಿ ರೂ. ಅನುದಾನ ತಂದಿದ್ದು, ಆ ಕಾಮಗಾರಿಯನ್ನು ಬಿಜೆಪಿ ಸರ್ಕಾರ ಇದುವರೆಗೆ ಮಾಡಿಸಿಲ್ಲ. ಬೆಂಜನಪದವು ಕ್ರೀಡಾಂಗಣ, ಪಂಜೆ ಮಂಗೇಶರಾಯ ಭವನ, ಪಡೀಲು ಜಿಲ್ಲಾಧಿಕಾರಿ ಕಚೇರಿ ಕಾಮಗಾರಿಗಳನ್ನು ಬಿಜೆಪಿ ಪೂರ್ತಿ ಮಾಡಿಲ್ಲ. ಶವ ಸಂಸ್ಕಾರಕ್ಕೆ ಬರುತ್ತಿದ್ದ 5 ಸಾವಿರ ಸಹಾಯ ಧನವನ್ನು ನಿಲ್ಲಿಸಿದ ಧರಿದ್ರ ಸರ್ಕಾರ ಈಗ ಆಡಳಿತ ಮಾಡುತ್ತಿದೆ. ಶಾಸಕನಾಗಿ ಬಂದರೆ ಕನ್ಯಾನ ಪದವಿ ಕಾಲೇಜಿಗೆ ನೂತನ ಕಟ್ಟಡ, ಬೆಂಬನಪದವಿನಲ್ಲಿ ಜಿಲ್ಲಾ ಮಟ್ಟದ ಕ್ರೀಡಾಂಗಣವನ್ನು 100 ಕೋಟಿಯಲ್ಲಿ ನಿರ್ಮಾಣ, ಬಂಟ್ವಾಳ ಕ್ಷೇತ್ರಕ್ಕೆ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು, ಅಂಡರ್ ಆರ್ಮ್ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ ಮಾಡುವ ನಿಶ್ಚಿತ ಎಂದು ತಿಳಿಸಿದರು.

ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ ಮಾತನಾಡಿ ಪರ ಧರ್ಮವನ್ನು ಗೌರವಿಸುವ ಜತಗೆ ನಮ್ಮ ಧರ್ಮವನ್ನು ಆಚರಿಸುವ ಕೆಲಸವನ್ನು ಮಾಡಬೇಕಾಗಿದೆ. ರಮಾನಾಥ ರೈ ಅವರ ವಿಜಯ ಜಿಲ್ಲೆಯ ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತನ ವಿಜಯವಾಗಿದೆ. ರಸ್ತೆ ಚರಂಡಿ ಬಗ್ಗೆ ಯೋಚನೆ ಮಾಡಬೇಡಿ ಎನ್ನುವ ಸಂಸದನನ್ನು ಮೂರು ಬಾರಿ ಆಯ್ಕೆ ಮಾಡಿದ ನೀವು ಶತ ಮೂರ್ಖರು ಎಂದು ಹೊರ ರಾಜ್ಯದ ಜನ ಹೇಳುತ್ತಿದ್ದಾರೆ. ರಮಾನಾಥ ರೈ ಸಾಧನೆಯ ಮುಂದೆ ಬಿಜೆಪಿಯವರ ಸಾಧನೆ ಶೂನ್ಯ ಎಂದರು.

ಮಾಣಿ ಗ್ರಾ.ಪಂ.ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ ರಮಾನಾಥ ರೈ ಅವಧಿಯಲ್ಲಿ ಕ್ಷೇತ್ರಕ್ಕೆ ತಂದ ೫೦೦೦ ಕೋಟಿ ರೂ.ಗಳ ಅನುದಾನಗಳ ವಿವರ ನೀಡಿದರು. ಬೆಳಗ್ಗೆ ಸಾಲೆತ್ತೂರು ಶಾಲೆಯ ಬಳಿ ಯಾತ್ರೆಗೆ ಚಾಲನೆ ನೀಡಲಾಯಿತು. ಬಳಿಕ ತಲೆಕ್ಕಿ, ಬೊಳ್ಮಾರು, ಆನೆಕಲ್ಲು, ಮಿತ್ತನಡ್ಕ ಮತ್ತು ಕನ್ಯಾನದಲ್ಲಿ ಪಾದಯಾತ್ರೆ ಸಾಗಿತು.