

ಮೂಡಲಗಿ: ಅರಭಾವಿ ಕ್ಷೇತ್ರದಲ್ಲಿ ಇಲ್ಲಿಯವರೆಗೆ ಮುಸ್ಲಿಂ ಸಮುದಾಯ ಬಾಂಧವರಿಗೆ ಇತರೆ ಸಮಾಜದವರಿಂದ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಂಡಿದ್ದು, ನಾನು ಶಾಸಕನಾಗಿ ಆಯ್ಕೆಯಾದ ಬಳಿಕ ಎಲ್ಲ ಸಮುದಾಯಗಳು ಒಗ್ಗಟ್ಟಿನ ಮಂತ್ರ ಪಠಿಸುವ ಮೂಲಕ ಶಾಂತಿ ಸಾಮರಸ್ಯವನ್ನು ಕಾಪಾಡಿಕೊಂಡು ಬರುತ್ತಿವೆ ಎಂದು ಶಾಸಕ ಹಾಗೂ ಕೆಎಮ್ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು
ಸೋಮವಾರದಂದು ಮೂಡಲಗಿ ಪಟ್ಟಣದ ತಹಶೀಲ್ದಾರ ಕಚೇರಿಯ ಹತ್ತಿರ ಜರುಗಿದ ಅರಭಾವಿ ಕ್ಷೇತ್ರದ ಮುಸ್ಲಿಂ ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮುಸ್ಲಿಂ ಸಮುದಾಯದ ಸಮಗ್ರ ಅಭಿವೃದ್ದಿಗೆ ಶ್ರಮಿಸಲಾಗುತ್ತಿದೆ ಎಂದು ಹೇಳಿದರು.

ಮುಸ್ಲಿಂ ಸಮುದಾಯದ ಪ್ರಗತಿಗಾಗಿ ಸಾಕಷ್ಟು ಶ್ರಮಿಸಿದ್ದೇನೆ, ಈ ಸಮಾಜ ಶಿಕ್ಷಣದಲ್ಲಿ ಕ್ರಾಂತಿ ಮಾಡಬೇಕಿದೆ. ಬಹುತೇಕ ಎಲ್ಲ ಉದ್ಯೋಗಗಳಲ್ಲಿ ಗುರುತಿಸಿಕೊಂಡಿರುವ ಈ ಸಮಾಜದವರು ಶ್ರಮ ಜೀವಿಗಳು. ಯಾವುದೇ ಕೆಲಸವನ್ನು ಮಾಡಲು ಹಿಂಜರಿಯುವದಿಲ್ಲ. ನನಗೆ ಕೇವಲ ಒಂದು ಸಮುದಾಯದ ಮತವನ್ನು ಪಡೆದು ಆಯ್ಕೆಯಾಗದೇ ಎಲ್ಲ ಸಮುದಾಯಗಳು ನನಗೆ ಬೆಂಬಲ ಕೊಟ್ಟು ಆಶೀರ್ವಾದ ಮಾಡಿದಾಗಲೇ ಖುಷಿಯಾಗುತ್ತದೆ. ಪ್ರತಿ ಸಮಾಜಗಳ ಅಭ್ಯುದಯಕ್ಕೆ ದುಡಿಯುತ್ತಿದ್ದೇನೆ. ಅದರಂತೆ ಎಲ್ಲ ಸಮಾಜಗಳು ಕೂಡ ನನ್ನ ಬೆನ್ನಿಗಿವೆ. ಸತತವಾಗಿ ಆಶೀರ್ವಾದ ಮಾಡುತ್ತಾ ಬರುತ್ತಿದ್ದಾರೆ. ಕ್ಷೇತ್ರದ ಪ್ರತಿಯೊಬ್ಬ ಮತದಾರನಿಗೂ ನನ್ನ ಶತ ಕೋಟಿ ನಮನಗಳನ್ನು ಸಲ್ಲಿಸುತ್ತೇನೆಂದರು.

ಮುಸ್ಲಿಂ ಸಮಾಜದ ಮಕ್ಕಳು ಸುಶಿಕ್ಷಿತರಾಗಿ ಸಮಾಜದಲ್ಲಿ ಮುಂದೆ ಬರಬೇಕು. ಶಾಲೆಗೆ ಹೋಗುವ ಮಕ್ಕಳನ್ನು ಎಂದಿಗೂ ಬಿಡಿಸಬೇಡಿ, ಶಿಕ್ಷಣವನ್ನು ಮೊಟುಕುಗೊಳಿಸಬೇಡಿ. ಇಂದು ಪ್ರತಿ ಮಕ್ಕಳು ಶೇಕಡಾ ೯೦ಕ್ಕಿಂತ ಹೆಚ್ಚು ಅಂಕಗಳನ್ನು ಪಡೆಯುತ್ತಿದ್ದಾರೆಂದರೆ ಅದಕ್ಕೆ ಶಿಕ್ಷಣದ ಬದಲಾವಣೆಯೇ ಕಾರಣ. ಸಮಾಜದಲ್ಲಿ ಶಿಕ್ಷಣದಿಂದ ನಾವು ಬದಲಾವಣೆ ತರಬೇಕಾಗಿದೆ. ಇದಕ್ಕೆ ಪಾಲಕ-ಪೋಷಕರು ಪ್ರೋತ್ಸಾಹ ನೀಡಬೇಕೆಂದು ತಿಳಿಸಿದರು.

ಅಧ್ಯಕ್ಷತೆಯನ್ನು ಹಿರಿಯ ಮುಖಂಡ ಜನಾಬ್ ಎಚ್.ಡಿ.ಮುಲ್ಲಾ ವಹಿಸಿದ್ದರು. ವೇದಿಕೆಯಲ್ಲಿ ಯುವ ಧುರೀಣ ಸರ್ವೋತ್ತಮ ಜಾರಕಿಹೊಳಿ, ಮುಸ್ಲಿಂ ಸಮಾಜದ ಮುಖಂಡರಾದ ಅಜೀಜ್ ಡಾಂಗೆ, ಮಲ್ಲಿಕ ಹುಣಶ್ಯಾಳ, ಅನ್ವರ ನದಾಫ, ಹುಸೇನಸಾಬ ಶೇಖ, ಅಬ್ದುಲ್ಗಫಾರ ಡಾಂಗೆ, ನನ್ನುಸಾಬ ಶೇಖ, ರಾಜೇಸಾಬ ಖೆಮಲಾಪೂರ, ಅಮೀನಸಾಬ ಯಳ್ಳೂರ, ಹಾಸಿಮ್ ನಗಾರ್ಚಿ, ದಸ್ತಗೀರಸಾಬ ಶಿರಹಟ್ಟಿ, ನಿಜಾಮಸಾಬ ಜಮಾದಾರ, ರಿಯಾಜ ಯಾದವಾಡ, ಇಕ್ಬಾಲ್ ಸರ್ಕಾವಸ್, ರಸೂಲ ಮಿರ್ಜಾನಾಯಿಕ, ರಾಜು ಬಳಿಗಾರ, ಹಾಜೀಸಾಬ ನದಾಫ, ಬಂದೇನವಾಜ ನದಾಫ, ಶಾನೂರ ಮೊಘಲ, ಇಮಾಮ ಮೋಮಿನ, ಇಸ್ಮಾಯಿಲ್ ಲಾಡಖಾನ, ಎಮ್.ಎಸ್.ದಂತಾಳೆ, ಮಕ್ತುಮಸಾಬ ಖಾಜಿ, ಸೇರಿದಂತೆ ಅರಭಾವಿ ಕ್ಷೇತ್ರದ ಮುಸ್ಲಿಂ ಬಾಂಧವರು ಉಪಸ್ಥಿತರಿದ್ದರು.