

ಲಂಡನ್: ʼಖಲಿಸ್ತಾನ್ ಜಿಂದಾಬಾದ್..ʼ ಎಂದು ಕೂಗುತ್ತಾ ಖಲಿಸ್ತಾನ್ ಪ್ರತ್ಯೇಕತಾವಾದಿಗಳು ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್‌ನಿಂದ ತ್ರಿವರ್ಣ ಧ್ವಜವನ್ನು ಕೆಳಗಿಳಿಸಿರುವ ಘಟನೆ ನಡೆದಿದೆ. ಘಟನೆಗೆ ಬೇಸರ ವ್ಯಕ್ತಪಡಿಸಿರುವ ಭಾರತ ಸರ್ಕಾರದ ವಿದೇಶಾಂಗ ಸಚಿವಾಲಯ ಬ್ರಿಟನ್‌ನ ಹಿರಿಯ ರಾಜತಾಂತ್ರಿಕರಿಗೆ ಸಮನ್ಸ್ ನೀಡಿದೆ.

ಖಲಿಸ್ತಾನ್ ಪ್ರತ್ಯೇಕತಾವಾದಿ ಅಮೃತಪಾಲ್ ಸಿಂಗ್ ಮತ್ತು ಅವರ ಬೆಂಬಲಿಗರ ವಿರುದ್ಧ ಸಿಖ್ಖರ ಒಂದು ವರ್ಗದ ಪ್ರತಿಭಟನೆ ನಡೆಸುತ್ತಿದೆ. ಅಮೃತ್‌ಪಾಲ್ ಬಂಧನಕ್ಕೆ ಪಂಜಾಬ್ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಅಲ್ಲದೇ ಅಮೃತ್‌ಪಾಲ್ ಆಪ್ತರನ್ನು ವಶಕ್ಕೆ ಪಡೆದಿದೆ. ಇದೇ ಹೊತ್ತಿನಲ್ಲಿ ಲಂಡನ್‌ನಲ್ಲಿ ಖಲಿಸ್ತಾನ್ ಪ್ರತ್ಯೇಕತವಾದಿಗಳು ಭಾರತದ ಧ್ವಜವನ್ನು ಕೆಳಗಿಳಿಸಿ ಘೋಷಣೆ ಕೂಗಿದ್ದಾರೆ. ಅಲ್ಲದೇ ಖಲಿಸ್ತಾನ್ ಧ್ವಜವನ್ನು ಹಾರಿಸಿದ್ದಾರೆ. ಈ ದೃಶ್ಯದ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಹೈಕಮಿಷನ್ ಆವರಣಕ್ಕೆ ಪ್ರವೇಶಿಸಲು ಹೇಗೆ ಅನುಮತಿಸಲಾಯಿತು? ಈ ಸಂದರ್ಭದಲ್ಲಿ ಬ್ರಿಟಿಷ್ ಭದ್ರತೆಯ ಸಂಪೂರ್ಣ ಅನುಪಸ್ಥಿತಿ ಕುರಿತು ವಿವರಣೆ ನೀಡುವಂತೆ ಭಾರತ ಸರ್ಕಾರ ಕೇಳಿದೆ. ಯುಕೆಯಲ್ಲಿರುವ ಭಾರತೀಯ ರಾಜತಾಂತ್ರಿಕ ಆವರಣ ಮತ್ತು ಸಿಬ್ಬಂದಿ ಭದ್ರತೆ ವಿಚಾರದಲ್ಲಿ ಯುಕೆ ಸರ್ಕಾರದ ಉದಾಸೀನತೆ ತೋರಿರುವುದು ಸರಿಯಲ್ಲ ಎಂದು ಸರ್ಕಾರ ಬೇಸರ ವ್ಯಕ್ತಪಡಿಸಿದೆ.
ವೀಡಿಯೋದಲ್ಲಿ ಏನಿದೆ?
ʼಖಲಿಸ್ತಾನ್ ಜಿಂದಾಬಾದ್ʼ ಎಂದು ಘೋಷಣೆ ಕೂಗುವ ಮೂಲಕ ಪ್ರತ್ಯೇಕತವಾದಿಗಳು, ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್‌ನಿಂದ ತ್ರಿವರ್ಣ ಧ್ವಜವನ್ನು ಕೆಳಗಿಳಿಸಿದ್ದಾರೆ. ಅಲ್ಲದೇ ಖಲಿಸ್ತಾನ್ ಧ್ವಜವನ್ನು ಹಾರಿಸಿ ಪ್ರತಿಭಟನೆ ನಡೆಸಿದ್ದಾರೆ.

ಕೋಮು ಸಂಘರ್ಷ ಹರಡಲು ಯತ್ನಿಸಿದ ಆರೋಪದಲ್ಲಿ, ಖಾಲಿಸ್ತಾನ್ ಪರ ಸಹಾನುಭೂತಿ ಹೊಂದಿರುವ ಸಿಖ್ ಮೂಲಭೂತವಾದಿ ಧರ್ಮ ಪ್ರಚಾರಕ ಅಮೃತ್‌ಪಾಲ್ ಸಿಂಗ್ ವಿರುದ್ಧ ಪಂಜಾಬ್ ಪೊಲೀಸರು ಕಳೆದ ಎರಡು ದಿನಗಳಿಂದ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈ ವೇಳೆ ಆತನ ಆಪ್ತರನ್ನು ಬಂಧಿಸಿದ್ದಾರೆ. ಅಮೃತಪಾಲ್ ಸಿಂಗ್ ಅವರ 78 ಬೆಂಬಲಿಗರನ್ನು ಬಂಧಿಸಲಾಗಿದೆ.
