

ಬಂಟ್ವಾಳ (ಮಾ.19): ಕಳೆದ ಬಾರಿ ರಾಜಕೀಯ ಪ್ರಬುದ್ಧತೆಯ ಕೊರತೆಯಿಂದ ಕಾಂಗ್ರೆಸ್ ಪಕ್ಷವನ್ನು ನಂಬಿ ಸೋತಿದ್ದೇವೆ, ಈ ಬಾರಿ ಅಂತಹ ತಪ್ಪು ಮಾಡುವುದಿಲ್ಲ, 2023 ರ ವಿಧಾನಸಭಾ ಚುನಾವಣಾ ಕಣದಿಂದ ಹಿಂದಕ್ಕೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಬಂಟ್ವಾಳ ವಿಧಾನಸಭಾ ಕ್ಷೇತ್ರದ ಎಸ್ಡಿಪಿಐ ಅಭ್ಯರ್ಥಿ ಇಲ್ಯಾಸ್ ತುಂಬೆ ತಿಳಿಸಿದ್ದಾರೆ.

ಅವರು ಬಿ.ಸಿ. ರೋಡಿನ ಪ್ರೆಸ್ಕ್ಲಬ್ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಚುನಾವಣೆಯಲ್ಲಿ 25 ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಎಸ್ಡಿಪಿಐ ತೀರ್ಮಾನಿಸಿತ್ತು, ಬಂಟ್ವಾಳ ಸೇರಿದಂತೆ ಹಲವು ಅಭ್ಯರ್ಥಿಗಳನ್ನೂ ಪಕ್ಷ ಘೋಷಿಸಿತ್ತು. ಆದರೆ ಆಗ ಕಾಂಗ್ರೆಸ್ನ ಹಿರಿಯ ಪ್ರಭಾವಿ ನಾಯಕರ ಮನವಿ ಮೇರೆಗೆ ಎರಡು ಷರತ್ತಿನ ಒಪ್ಪಂದವಾಗಿತ್ತು. ಆದರೆ ಚುನಾವಣೆಯ ಸಂದರ್ಭದಲ್ಲಿ ಅವರು ನೀಡಿದ ಮಾತನ್ನು ಪಾಲಿಸಿಲ್ಲ ಎಂದು ಆರೋಪಿಸಿದರು. ಕಳೆದ ಬಾರಿ ಪಕ್ಷದ ತಪ್ಪು ನಿರ್ಧಾರದಿಂದ ಪಕ್ಷದ ಸಂಘಟನೆಗೆ ಬಲವಾದ ಹೊಡೆದ ಬಿದ್ದಿದೆ. ಹೀಗಾಗಿ ಈ ಬಾರಿ ಅಂತಹ ತಪ್ಪು ಮರುಕಳಿಸದಂತೆ ಮತ್ತು ತಳಮಟ್ಟದಿಂದ ಪಕ್ಷ ಸಂಘಟನೆಗೆ ವಿಶೇಷ ಒತ್ತು ನೀಡಲಾಗಿದೆ ಎಂದು ಇಲ್ಯಾಸ್ ತಿಳಿಸಿದರು.
