

ಕೃಪೆ :ನಾನು ಗೌರಿ
“ಟಿಪ್ಪು ಸುಲ್ತಾನರನ್ನು ಕೊಂದಿದ್ದು ಉರಿಗೌಡ, ದೊಡ್ಡ ನಂಜೇಗೌಡ” ಎಂದು ಕರ್ನಾಟಕದಲ್ಲಿ ನಕಲಿ ಇತಿಹಾಸವನ್ನು ಸೃಷ್ಟಿಸುತ್ತಿರುವಂತೆಯೇ, ಉತ್ತರಭಾರತದಲ್ಲಿ ಗುರ್ಜರ್ ಸಮುದಾಯವನ್ನು ಮುಖ್ಯವಾಗಿಟ್ಟುಕೊಂಡು ನಕಲಿ ಇತಿಹಾಸ ಕಟ್ಟುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಿರುವ ಕುರಿತು ‘ದಿ ಸ್ಕ್ರಾಲ್.ಇನ್’ ವರದಿ ಮಾಡಿದೆ.
ಉರಿಗೌಡ ಮತ್ತು ನಂಜೇಗೌಡ ಎಂಬ ಕಾಲ್ಪನಿಕ ಪಾತ್ರಗಳ ಮೂಲಕ ಒಕ್ಕಲಿಗ ಸಮುದಾಯವನ್ನು ವೋಟ್‌ಬ್ಯಾಂಕ್ ಮಾಡಿಕೊಳ್ಳಲು ಕರ್ನಾಟಕದಲ್ಲಿ ವಿಫಲ ಯತ್ನ ಮಾಡುತ್ತಿರುವಂತೆಯೇ ಉತ್ತರದಲ್ಲಿ ಗುರ್ಜರ್ ಸಮುದಾಯವನ್ನು ಟಾರ್ಗೆಟ್ ಮಾಡಿಕೊಂಡು ನಕಲಿ ಇತಿಹಾಸ ಸೃಷ್ಟಿಸಲು ಪ್ರಯತ್ನಿಸಲಾಗಿದೆ. ಇತಿಹಾಸವನ್ನು ತಿರುಚಿ ನಿರ್ದಿಷ್ಟ ಸಮುದಾಯವನ್ನು ಸೆಳೆಯುವ ಹೊಸ ತಂತ್ರಗಾರಿಕೆಯನ್ನು ಸಂಘಪರಿವಾರ ಮಾಡುತ್ತಿದೆ.

ಕರ್ನಾಟಕದಲ್ಲಿ ಉರಿಗೌಡ, ದೊಡ್ಡನಂಜೇಗೌಡರನ್ನು ಪ್ರಸ್ತಾಪಿಸುತ್ತಿರುವಂತೆಯೇ ಉತ್ತರ ಭಾರತದಲ್ಲಿ ರಾಜಾ ಸುಹೇಲ್‌ದೇವ್ ಮತ್ತು ಗುರ್ಜರ್ ವೀರ ಮಹಿಳೆ ರಾಮ್‌ಪ್ಯಾರಿ ಗುರ್ಜರ್ ಎಂಬ ಪಾತ್ರಗಳನ್ನು ಚುನಾವಣಾ ರಂಗಕ್ಕೆ ಎಳೆದು ತರಲಾಗಿದೆ.
ಈ ಹಲವು ಪ್ರಕರಣಗಳಲ್ಲಿ ಬಿಜೆಪಿ ಹೇಳುವಂತೆ ಈ ವೀರರು ನಿಜವಾಗಿಯೂ ಅಸ್ತಿತ್ವದಲ್ಲಿಲ್ಲ ಎಂದು ಇತಿಹಾಸಕಾರರು ಹೇಳುತ್ತಾರೆ. ಆದಾಗ್ಯೂ ಹಿಂದುತ್ವ ಪಕ್ಷವು ಅಂತಹ ವಾಸ್ತವಿಕ ಸತ್ಯಗಳನ್ನು ಅಲ್ಲಗಳೆಯುತ್ತಲೇ ಬಂದಿದೆ.

ಒಕ್ಕಲಿಗ ಸಮುದಾಯದ ಪ್ರಾಬಲ್ಯವಿರುವ ಮಂಡ್ಯ ಜಿಲ್ಲೆಗೆ ಮೋದಿ ಆಗಮಿಸಲಿದ್ದ ಹಿನ್ನೆಲೆಯಲ್ಲಿ ‘ಕಾಲ್ಪನಿಕ ವ್ಯಕ್ತಿ’ಗಳಾದ ಉರಿಗೌಡ, ನಂಜೇಗೌಡರ ಹೆಸರಿನ ಮಹಾದ್ವಾರವನ್ನು ತೆರೆದು ನಗೆಪಾಟಲಿಗೀಡಾಯಿತು. ಸ್ಥಳೀಯರು, ವಿರೋಧ ಪಕ್ಷಗಳ ನಾಯಕರು ಆಕ್ರೋಶ ವ್ಯಕ್ತಪಡಿಸಿದ ಬಳಿಕ ಮಹಾದ್ವಾರವನ್ನು ತೆರವು ಮಾಡಲಾಯಿತು. ಇಷ್ಟೆಲ್ಲ ಆದರೂ ಬಿಜೆಪಿ ನಾಯಕರು ಇನ್ನು ಒಂದು ಹೆಜ್ಜೆ ಮುಂದೆ ಹೋಗಿ, “ಉರಿಗೌಡ, ನಂಜೇಗೌಡ ಐತಿಹಾಸಿಕ ವ್ಯಕ್ತಿಗಳು” ಎಂದು ಬಿಂಬಿಸುವ ವ್ಯರ್ಥ ಪ್ರಯತ್ನ ಮಾಡುತ್ತಲೇ ಇದ್ದಾರೆ.
ಮೈಸೂರು ರಂಗಾಯಣದ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಅವರು ‘ಟಿಪ್ಪು ನಿಜಕನಸುಗಳು’ ಎಂಬ ನಾಟಕವನ್ನು ರಚಿಸಿ, ಅಲ್ಲಿ ಜಾತಿ ಜಾತಿಗಳನ್ನು ಎತ್ತಿಕಟ್ಟುವ ಪ್ರಯತ್ನ ಮಾಡಿದರು. ಯಾವುದೇ ದಾಖಲೆಗಳಿಲ್ಲದೆ, ಸುಳ್ಳಿನ ನಾಟಕ ಕಟ್ಟಿ ಜಾತಿ ರಾಜಕಾರಣ ಮಾಡಲು ಮುಂದಾಗಿರುವುದನ್ನು ಜನರು ಗುರುತಿಸಲಾರಂಭಿಸಿದ್ದಾರೆ.

ಒಬ್ಬ ರಾಜಪ್ರಭುತ್ವ ಕಾಲದ ಮುಸ್ಲಿಂ ಸುಲ್ತಾನನನ್ನು ವರ್ತಮಾನದಲ್ಲಿ ನಿಲ್ಲಿಸಿ ಆತ ಹಿಂದೂ ವಿರೋಧಿಯಾಗಿದ್ದ, ಒಕ್ಕಲಿಗರ, ಚಿತ್ರದುರ್ಗದ ನಾಯಕರ, ಕ್ರಿಶ್ಚಿಯನ್ನರ, ಕೊಡವರ, ಬ್ರಾಹ್ಮಣರ ಹಾಗೂ ಕನ್ನಡದ ವಿರೋಧಿಯಾಗಿದ್ದ. ಟಿಪ್ಪುವನ್ನು ಬೆಂಬಲಿಸುವವರು ಇವರೆಲ್ಲರ ವಿರೋಧಿ ಎಂಬುದನ್ನು ಸುಳ್ಳುಸುಳ್ಳೇ ಸಾಧಿಸುವುದು ಇಲ್ಲಿನ ಉದ್ದೇಶ. ಕೃತಿಯಲ್ಲಿ ಮತ್ತೆಮತ್ತೆ ಪುನರಾವರ್ತಿತವಾಗುವ ಜಾತಿ ಉದ್ದೇಶಿತ ಸಾಲುಗಳೇ ಇದನ್ನು ಮಾರ್ದನಿಸುತ್ತದೆ. ಇದು ಹಿಂದೂ ರಾಷ್ಟ್ರ, ಮುಸ್ಲಿಮರು ದ್ವಿತೀಯ ದರ್ಜೆಯಲ್ಲಿ ಬದುಕಬೇಕು ಎಂಬ ಸಂವಿಧಾನ ವಿರೋಧಿ ಆಶಯವನ್ನು ಅಡ್ಡಂಡ ಕಾರ್ಯಪ್ಪ ಇಲ್ಲಿ ಪ್ರತಿಪಾದಿಸಿದ್ದರು. ಉರಿಗೌಡ, ದೊಡ್ಡ ನಂಜೇಗೌಡ ಎಂಬವರು ಟಿಪ್ಪುವನ್ನು ಕೊಂದರು ಎಂದು ನಾಟಕದ ಮೂಲಕ ಪ್ರಚಾರ ಮಾಡಿದರು
ಆದರೆ, ಉರಿಗೌಡ ಮತ್ತು ನಂಜೇಗೌಡ ಎಂಬ ವ್ಯಕ್ತಿಗಳು ನಿಜವಾಗಿಯೂ ಅಸ್ತಿತ್ವದಲ್ಲಿ ಇಲ್ಲ. ಒಕ್ಕಲಿಗ ಮತದಾರರನ್ನು ಸೆಳೆಯಲು ಬಿಜೆಪಿಯು ಅವರನ್ನು ಸೃಷ್ಟಿಸಿದೆ ಎಂದು ಐತಿಹಾಸ ತಜ್ಞರು ಹೇಳುತ್ತಾರೆ. ನಾಲ್ಕನೇ ಆಂಗ್ಲೋ-ಮೈಸೂರು ಯುದ್ಧದ ಸಮಯದಲ್ಲಿ ಬ್ರಿಟಿಷರೊಂದಿಗೆ ಹೋರಾಡುವಾಗ ಟಿಪ್ಪುವಿನ ಮರಣವಾಗಿದೆ ಎಂದು ಇತಿಹಾಸ ಕೃತಿಗಳು ಹೇಳುತ್ತವೆ.