

ಬೆಂಗಳೂರು : ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿಯಲ್ಲಿ ಒಂದು ಡಜನ್ ಮಂದಿ ಶಾಸಕರಿಗೆ ಟಿಕೆಟ್ ಕೈ ತಪ್ಪುವ ಸಾಧ್ಯತೆಗಳ ಬಗ್ಗೆ ವರಿಷ್ಠರ ಪಡಸಾಲೆಯಲ್ಲಿ ಗಂಭೀರ ಚರ್ಚೆ ನಡೆದಿದೆ.ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ರಾಜ್ಯದಲ್ಲಿ ಟಿಕೆಟ್ ಹಂಚಿಕೆ ಕುರಿತು ಈಚೆಗೆ ಮೊದಲ ಹಂತದ ಸಭೆಯೊಂದು ನಡೆದಿದ್ದು, ಇಲ್ಲಿ ಶಾಸಕರ ಕಾರ್ಯನಿರ್ವಹಣೆ ಕುರಿತು ಗಂಭೀರ ಚರ್ಚೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ರಾಜ್ಯ ಸರ್ಕಾರದ ವಿರುದ್ಧ ಇರುವ ಆಡಳಿತ ವಿರೋಧಿ ಅಲೆ ಹಾಗೂ ಕ್ಷೇತ್ರವಾರು ಶಾಸಕರ ಬಗ್ಗೆ ಇರುವ ಪ್ರತಿಕೂಲ ಅಭಿಪ್ರಾಯಗಳ ಸಭೆಯಲ್ಲಿ ಸ್ಥೂಲವಾಗಿ ಚರ್ಚೆ ನಡೆಸಲಾಗಿದೆ. ಈ ಹಿನ್ನೆಲೆಯಲ್ಲಿ ಒಂದು ಡಜನ್ ಮಂದಿಗೆ ಟಿಕೆಟ್ ಕೈತಪ್ಪಿದರೂ ಅಚ್ಚರಿ ಇಲ್ಲ ಎಂದು ಹೇಳಲಾಗುತ್ತಿದೆ. ಹಿಂದುತ್ವದ ಭದ್ರಕೋಟೆಯಾದ ಕರಾವಳಿ ಜಿಲ್ಲೆಗಳಲ್ಲೂ ಕೆಲವರಿಗೆ ಟಿಕೆಟ್ ಕೈ ತಪ್ಪುವ ಸಾಧ್ಯತೆ ಎದುರಾಗಿದೆ. ಈ ಅಂಶ ರಾಜ್ಯ ಬಿಜೆಪಿ ಘಟಕದಲ್ಲಿ ಸಂಚಲನ ಮೂಡಿಸಿದೆ. ಈ ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಸೇರಿದಂತೆ ಆಯ್ದ ಕೆಲವೇ ವ್ಯಕ್ತಿಗಳು ಮಾತ್ರ ಭಾಗಿಯಾಗಿದ್ದರು.ಈ ಸಭೆಯಲ್ಲಿ ಪಕ್ಷದ ಇತ್ತೀಚಿನ ವಿದ್ಯಮಾನಗಳು ಹಾಗೂ ಸಮೀಕ್ಷಾ ವರದಿಗಳನ್ನು ಆಧರಿಸಿ ಚರ್ಚೆ ನಡೆದಿದೆ ಎಂದು ತಿಳಿದು ಬಂದಿದೆ. ಇದು ಟಿಕೆಟ್ ಹಂಚಿಕೆ ವಿಚಾರಕ್ಕೆ ಸಂಬಂಧಪಟ್ಟಂತೆ ವರಿಷ್ಠರ ಹಂತದಲ್ಲಿ ನಡೆದ ಮೊದಲ ಸಭೆಯಾಗಿತ್ತು. ಹೀಗಾಗಿ ಈ ಸಭೆಯಲ್ಲಿ ನಡೆದ ಚರ್ಚೆಗಳ ಬಗ್ಗೆ ಪಕ್ಷದ ವಲಯದಲ್ಲಿ ಭಾರಿ ಕುತೂಹಲ ಸೃಷ್ಟಿಯಾಗಿದೆ.

ರಾಜ್ಯದಲ್ಲೂ ಗುಜರಾತ್ ಮಾದರಿಯಲ್ಲಿ ಒಂದಿಷ್ಟು ಜನರಿಗೆ ಟಿಕೆಟ್ ನಿರಾಕರಿಸಲಾಗುತ್ತದೆ ಎಂಬ ವಿಚಾರ ಐದಾರು ತಿಂಗಳಿಂದ ಚರ್ಚೆಯಾಗುತ್ತಿದೆ. ಹಾಲಿ ಶಾಸಕರೆಲ್ಲರಿಗೂ ಟಿಕೆಟ್ ನೀಡಲು ಸಾಧ್ಯವಿಲ್ಲ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಸಿಎಂ ಬಸವರಾಜ ಬೊಮ್ಮಾಯಿ ಕೆಲವು ದಿನಗಳ ಹಿಂದೆ ಹೇಳಿದ್ದುಂಟು.