

ಹಾಸನ: ತಾಯಿಯನ್ನು ದೇವರಿಗೆ ಹೋಲಿಸಲಾಗುತ್ತೆ. ಆಕೆಯ ಎದೆ ಹಾಲನ್ನು(Human Milk Bank) ಅಮೃತಕ್ಕೆ ಹೋಲಿಸಲಾಗುತ್ತೆ. ಸದ್ಯ ಇಂತಹ ಎದೆ ಹಾಲಿನ ಬ್ಯಾಂಕ್ ಹಾಸನದಲ್ಲಿ ತೆರೆಯಲಾಗಿದೆ. ಮಾರ್ಚ್ 13ರ ಸೋಮವಾರ ಹಾಸನದ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಮಾನವ ಹಾಲಿನ ಬ್ಯಾಂಕ್ ಉದ್ಘಾಟನೆ ಮಾಡಲಾಗಿದೆ.

ಈ ಮಿಲ್ಕ್ ಬ್ಯಾಂಕ್ಗಳಲ್ಲಿ ತಾಯಿ ಹಾಲಿನ ಸಂಗ್ರಹ, ಪರೀಕ್ಷೆ, ಸಂಸ್ಕರಣೆ, ಶೇಖರಣೆ ಮತ್ತು ವಿತರಣೆ ಮಾಡಲಾಗುತ್ತೆ. ಇದು ನಿರ್ಗತಿಕ ಶಿಶುಗಳಿಗೆ ಹಾಗೂ ಅನಾರೋಗ್ಯದಿಂದ ಬಳಲುತ್ತಿರುವ ತಾಯಂದಿರ ಮಕ್ಕಳಿಗೆ ಬಹಳ ಅನುಕೂಲವಾಗಲಿದೆ. ಹ್ಯೂಮನ್ ಮಿಲ್ಕ್ ಬ್ಯಾಂಕ್ ಅನ್ನು ಅಬಕಾರಿ ಸಚಿವ, ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಕೆ. ಗೋಪಾಲಯ್ಯ ಅವರು ಉದ್ಘಾಟಿಸಿದರು. ಇನ್ನು ಈ ಬಗ್ಗೆ HIMS ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಈ ಸೌಲಭ್ಯವು ಶಿಶುಗಳು, ದತ್ತು ಪಡೆದ ಶಿಶುಗಳು ಮತ್ತು ಜನ್ಮ ನೀಡಿದ ನಂತರ ತಾಯಿ ಮರಣ ಹೊಂದಿದ ಶಿಶುಗಳಲ್ಲಿ ಅಪೌಷ್ಟಿಕತೆಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ ಎಂದು ತಿಳಿಸಿದೆ.

ಹುಟ್ಟಿದ ಮಕ್ಕಳಿಗೆ ಕನಿಷ್ಠ ಒಂದು ವರ್ಷದ ವರೆಗೆ ತಾಯಿಯ ಎದೆಹಾಲನ್ನ ಕುಡಿಸೋದ್ರಿಂದ ಮಕ್ಕಳ ದೈಹಿಕ, ಮಾನಸಿಕ, ಬೆಳವಣಿಗೆ ಮೇಲೆ ಸಾಕಷ್ಟು ಪರಿಣಾಮ ಬೀರುತ್ತೆ. ಹಾಗಾಗಿ ಕಡ್ಡಾಯವಾಗಿ ಎಲ್ಲಾ ತಾಯಂದಿರು ಹುಟ್ಟಿದ ಮಕ್ಕಳಿಗೆ ಬೇರೆ ಯಾವುದೇ ಅಹಾರ ನೀಡದೆ ಎದೆಯ ಹಾಲನ್ನೆ ಕೊಡಬೇಕು ಎನ್ನೋ ಸಲಹೆಯನ್ನೂ ನೀಡ್ತಾರೆ. ಆದ್ರೆ ದುರಾದೃಷ್ಟವೋ, ಅಥವಾ ಹಲವು ಸಮಸ್ಯೆಯ ಕಾರಣವೋ ಏನೋ ಅದೆಷ್ಟೋ ಮಕ್ಕಳಿಗೆ ಹುಟ್ಟಿದ ಕೂಡಲೆ ತಾಯಿ ಹಾಲು ಸಿಗೋದಿಲ್ಲ ಎನ್ನೋದು ಒಂದೆಡೆಯಾದ್ರೆ. ಇನ್ನು ಕೆಲ ತಾಯಿಯರಿಗೆ ಹೆಚ್ಚಿನ ಪ್ರಮಾಣದಲ್ಲಿ ಹಾಲು ಲಭ್ಯವಾಗದೆ ಸಮಸ್ಯೆ ಎದುರಾಗುತ್ತೆ. ಹಾಗಾಗಿ ಯಾರಿಗೆ ಹಾಲು ಲಭ್ಯತೆ ಇರೋದಿಲ್ಲವೂ ಅವರಿಗೆ ಲಭ್ಯತೆ ಇರೋ ತಾಯಂದಿರಿಂದ ಸಂಗ್ರಹಿಸಿದ ಎದೆ ಹಾಲನ್ನು ನೀಡೋ ಮೂಲಕ ಮಕ್ಕಳ ಬೆಳವಣಿಗೆ ನೆರವಾಗಬೇಕು ಎನ್ನುವ ದೃಷ್ಟಿಯಲ್ಲಿ ಹಿಮ್ಸ್ ಇಂತಹದೊಂದು ಮಹತ್ವದ ಹೆಜ್ಜೆ ಇಟ್ಟಿದೆ.