

ಮಂಗಳೂರು :ಮಂಗಳೂರು ವಿಶ್ವವಿದ್ಯಾಲಯದ 41ನೇ ಘಟಿಕೋತ್ಸವದಲ್ಲಿ ಕಣಚೂರು ಸಮೂಹ ಸಂಸ್ಥೆಗಳ ಅಧ್ಯಕ್ಷ ಹಾಜಿ ಕಣಚೂರು ಯು. ಕೆ.ಮೋನು,ಕುಂದಾಪುರ ಗಂಗೊಳ್ಳಿಯ ಸಮಾಜ ಸೇವಕ ಜಿ. ರಾಮಕೃಷ್ಣ ಆಚಾರ್, ಮಂಗಳೂರು ಶಾರದಾ ಶಿಕ್ಷಣ ಸಂಸ್ಥೆ ಯ ಅಧ್ಯಕ್ಷ ಎಮ್. ಬಿ. ಪುರಾಣಿಕ್ ಈ ಮೂವರಿಗೆ ಗೌರವ ಡಾಕ್ಟರೇಟ್ ಪ್ರಧಾನ ಮಾಡಲು ಕುಲಾಧಿಪತಿ ಅನುಮೋದನೆ ನೀಡಿದ್ದಾರೆ ಎಂದು ವಿ ವಿ ಯ ಕುಲಪತಿ ಪ್ರೊ. ಪಿ.ಎಸ್ .ಎಡಪಾಡಿತ್ತಾಯ ತಿಳಿಸಿದ್ದಾರೆ.

ಕಣಚೂರು ಹಾಜಿ ಯು. ಕೆ. ಮೋನು ಹಾಗೂ ಎಂ. ಬಿ. ಪುರಾಣಿಕ್ ರವರಿಗೆ ಶಿಕ್ಷಣ ಮತ್ತು ಸಮಾಜ ಸೇವೆಗಾಗಿ ಅದೇ ರೀತಿ ಜಿ. ರಾಮಕೃಷ್ಣ ಆಚಾರ್ ರವರಿಗೆ ಕೃಷಿ ಮತ್ತು ಸಮಾಜ ಸೇವೆಗಾಗಿ ಗೌರವ ಡಕ್ಟಾರೇಟ್ ಪದವಿ ಪ್ರದಾನ ಮಾಡಲಾಗುತ್ತದೆ.ಮಾರ್ಚ್ 15 ರಂದು ನಡೆಯುವ ವಿ ವಿ ಘಟಿಕೋತ್ಸವದಲ್ಲಿ ಪದವಿ ಪ್ರದಾನ ಮಾಡಲಾಗುವುದೆಂದು ಅವರು ತಿಳಿಸಿದರು.

ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯ ಅದಿ ನಿಯಮ 2000 ದ ನಿಯಮ 69ರ ಅಡಿ ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಗಣ್ಯ ವ್ಯಕ್ತಿ ಗಳಿಗೆ ಗೌರವ ಡಕ್ಟಾರೇಟ್ ಪದವಿ ನೀಡಲು ಅವಕಾಶ ವಿರುವ ಹಿನ್ನಲೆಯಲ್ಲಿ ಕಳೆದ ಡಿಸೆಂಬರ್ 2 ರಂದು ನಡೆದ ಸಿಂಡಿಕೇಟ್ ಸಭೆ ಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ 41 ನೇ ವಾರ್ಷಿಕ ಘಾಟಿಕೋತ್ಸವದಲ್ಲಿ ಅಪೂರ್ವ ಸಾಧಕರಿಗೆ ನೀಡಲಾಗುವ ಗೌರವ ಡಾಕ್ಟಾರೇಟ್ ಪದವಿಗೆ ಅರ್ಹರಾದ ವ್ಯಕ್ತಿ ಗಳ ಹೆಸರನ್ನು ಅಂತಿಮ ಗೊಳಿಸಿ ಕುಲಧಿಪತಿಗಳ ಒಪ್ಪಿಗೆಗೆ ಶಿಫಾರಸು ಮಾಡಲಾಗಿತ್ತು. ಅದರಂತೆ ಜನವರಿ 11 ರಂದು ಕುಲಾಧಿಪತಿಯವರು ಅನುಮೋದನೆ ನೀಡಿರುತ್ತಾರೆ


ಕಣಚೂರು ಮೋನು : ಕಣಚೂರು ಗ್ರೂಪ್ ಆಫ್ ಇಂಡಸ್ಟ್ರೀಸ್‌ನ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿರುವ ಯು.ಕೆ.ಮೋನು 2002ರಲ್ಲಿ ಕಣಚೂರು ಅಕಾಡೆಮಿ ಆಫ್ ಜನರಲ್ ಎಜುಕೇಷನ್ ಸಂಸ್ಥೆ ಸ್ಥಾಪಿಸಿ ಸ್ಥಳೀಯ ಮಹಿಳೆಯರು ಹಾಗೂ ಬಡವಿಗೆ ಗುಣಮಟ್ಟದ ಶಿಕ್ಷಣಕ್ಕೆ ನೆರವಾಗಿದ್ದಾರೆ. ಈ ಅಕಾಡೆಮಿಯು ಕಣಚೂರು ಪಬ್ಲಿಕ್ ಸ್ಕೂಲ್, ಕಣಚೂರು ಮಹಿಳಾ ಪದವಿ ಪೂರ್ವ ಕಾಲೇಜು, ಕಣಚೂರು ಉದ್ಯಮಾಡಳಿತ ಮತ್ತು ವಿಜ್ಞಾನ ಸಂಸ್ಥೆ, ಕಣಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆ, ಕಣಚೂರು ಫಿಸಿಯೋಥೆರಪಿ ಕಾಲೇಜು, ಕಣಚೂರು ನರ್ಸಿಂಗ್ ವಿಜ್ಞಾನ ಕಾಲೇಜು, ಕಣಚೂರು ಆರೋಗ್ಯ ವಿಜ್ಞಾನಗಳ ಸಂಸ್ಥೆ, ಕಣಚೂರು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರಗಳನ್ನು ಒಳಗೊಂಡಿದೆ. ಸಯ್ಯದ್ ಮದನಿ ಚಾರಿಟಬಲ್ ಟ್ರಸ್ಟ್ ಮತ್ತು ಉಳ್ಳಾಲ ದರ್ಗಾ ಅಸೋಸಿಯೇಷನ್ ಅಧ್ಯಕ್ಷರೂ ಆಗಿದ್ದ ಯು.ಕೆ.ಮೊನು ಅವರು ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರಕ್ಕೂ ಕೊಡುಗೆ ನೀಡಿದ್ದಾರೆ. ಯು.ಕೆ.ಮೋನು ಬಿಜಿನೆಸ್ ವೆಂಚರ್ ಮೂಲಕ ಜಾಗತಿಕ ಮಟ್ಟದಲ್ಲಿ ಉದ್ಯೋಗ ಪಡೆಯಲು ಅನೇಕರಿಗೆ ನೆರವಾಗಿದ್ದಾರೆ. ಉಚಿತ ವಿವಾಹ, ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಕಾರ್ಯಕ್ರಮಗಳನ್ನು ಏರ್ಪಡಿಸುವ ಮೂಲಕವೂ ಬಡವರಿಗೆ ನೆರವಾಗಿದ್ದಾರೆ ಎಂದು ವಿಶ್ವವಿದ್ಯಾಲಯದ ಪ್ರಕಟಣೆ ತಿಳಿಸಿದೆ.
