

ದೆಹಲಿ: ಈಶಾನ್ಯ ಭಾಗದಲ್ಲಿ ಅಧಿಪತ್ಯ ಸ್ಥಾಪಿಸಿದ ನಂತರ ಬಿಜೆಪಿಯು (BJP) ಕೇರಳವನ್ನು(Kerala) ಗೆಲ್ಲಲು ಹೊರಟಿದ್ದು ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರನ್ನು ಅಪ್ಪಿಕೊಳ್ಳಲು ಯೋಜಿಸುವ ಬೃಹತ್ ಸಾರ್ವಜನಿಕ ಸಂಪರ್ಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದೆ. ಕೇರಳದಲ್ಲಿ ಮುಸ್ಲಿಂ(Muslim) ಮತ್ತು ಕ್ರೈಸ್ತರ ಜನಸಂಖ್ಯೆ ಒಟ್ಟು ಜನಸಂಖ್ಯೆಯ ಶೇಕಡಾ 46 ರಷ್ಟಿದೆ. ಹೀಗಿರುವಾಗ ಸಾಂಪ್ರದಾಯಿಕವಾಗಿ ಎಡ ಮತ್ತು ಕಾಂಗ್ರೆಸ್‌ನ ಭದ್ರಕೋಟೆಯಾಗಿರುವ ರಾಜ್ಯದಲ್ಲಿ ಕಮಲ ಅರಳಿಸಲು ಇದು ನಿರ್ಣಾಯಕವಾಗಿದೆ.2019 ರ ಚುನಾವಣೆಗೆ ಮುನ್ನ ಕೇರಳದಲ್ಲಿ ತನ್ನ ಪ್ರಭಾವವನ್ನು ಹೆಚ್ಚಿಸಿದ ಬಿಜೆಪಿಗೆ ಅಲ್ಲಿ ಖಾತೆ ತೆರೆಯಲು ಸಾಧ್ಯವಾಗಲಿಲ್ಲ.

ದೇಶದಲ್ಲಿ ಮೋದಿ ಅಲೆ ಇದ್ದರೂ ಕೇರಳದಲ್ಲಿ ಶಬರಿಮಲೆ ವಿಷಯದಲ್ಲಿ ಬಿಜೆಪಿ ಜನಪ್ರೀತಿ ಗಳಿಸಲು ಪ್ರಯತ್ನಿಸಿದರೂ ಖಾತೆ ತೆರೆಯಲು ಸಾಧ್ಯವಾಗಲಿಲ್ಲ.ರಾಜ್ಯದ 20 ಲೋಕಸಭಾ ಸ್ಥಾನಗಳಲ್ಲಿ ಕಾಂಗ್ರೆಸ್ 15 ಸ್ಥಾನಗಳನ್ನು ಗೆದ್ದಿತ್ತು. ಅದರ ಮಿತ್ರಪಕ್ಷಗಳು ನಾಲ್ಕು ಸ್ಥಾನಗಳನ್ನು ಗೆದ್ದಿತ್ತು. ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಎರಡು ಮತ್ತು ಕೇರಳ ಕಾಂಗ್ರೆಸ್ (ಮಾಣಿ ಗುಂಪು) ಮತ್ತು ರೆವಲ್ಯೂಷನರೀ ಸೋಷ್ಯಲಿಸ್ಟ್ ಪಾರ್ಟಿ ತಲಾ ಒಂದು ಸ್ಥಾನವನ್ನು ಗಳಿಸಿತ್ತು. ಧಾರ್ಮಿಕ ವಿಷಯಗಳ ಬಗ್ಗೆ ಪಕ್ಷದ ನಿಲುವನ್ನು ಜನರು ತಿರಸ್ಕರಿಸಿದ್ದಾರೆ ಎಂಬುದು ಈ ಫಲಿತಾಂಶ ತೋರಿಸಿತ್ತು.

ಆದಾಗ್ಯೂ,ಬಲಪಂಥೀಯ ಬೆಂಬಲಿಗರು ಮತ್ತು ಎಡಪಕ್ಷಗಳ ನಡುವೆ ಕೋಮು ಘರ್ಷಣೆಯ ಅನೇಕ ಘಟನೆಗಳ ಹೊರತಾಗಿಯೂ ರಾಜ್ಯದಲ್ಲಿ ಬಿಜೆಪಿಯ ಬೆಳವಣಿಗೆಯು ಕುಂಠಿತವಾಗಿದೆ.
ಈ ಬಾರಿಯ ಬೃಹತ್ ಕಾರ್ಯಕ್ರಮವು ಈಸ್ಟರ್ ವಾರದಂದು ಕ್ರೈಸ್ತರ ಮನೆಗಳಿಗೆ ಬಿಜೆಪಿ ಕಾರ್ಯಕರ್ತರು ಭೇಟಿ ನೀಡುವುದನ್ನು ಒಳಗೊಂಡಿರುತ್ತದೆ ಎಂದು ಮೂಲಗಳು ತಿಳಿಸಿವೆ. ಏಪ್ರಿಲ್ 9, ಈಸ್ಟರ್ ಭಾನುವಾರದಂದು 10,000 ಬಿಜೆಪಿ ಕಾರ್ಯಕರ್ತರು 1 ಲಕ್ಷ ಕ್ರೈಸ್ತರ ಮನೆಗಳಿಗೆ ಭೇಟಿ ನೀಡಲಿದ್ದಾರೆ. ಕಳೆದ ವರ್ಷ, ಕ್ರಿಸ್‌ಮಸ್ ವಾರದಲ್ಲಿ, ಸಾವಿರಾರು ಬಿಜೆಪಿ ಕಾರ್ಯಕರ್ತರು ಕ್ರಿಶ್ಚಿಯನ್ನರ ಮನೆಗಳಿಗೆ ಉಡುಗೊರೆಗಳೊಂದಿಗೆ ಭೇಟಿ ನೀಡಿದ್ದರು ಎಂದು ಮೂಲಗಳು ತಿಳಿಸಿವೆ. ಬಲಪಂಥೀಯ ಕಾರ್ಯಕರ್ತರು ಏಪ್ರಿಲ್ ಮೂರನೇ ವಾರದಲ್ಲಿ ಈದ್‌ನಲ್ಲಿ ಮುಸ್ಲಿಮರ ಮನೆಗಳಿಗೆ ಭೇಟಿ ನೀಡುತ್ತಾರೆ.
ಏಪ್ರಿಲ್ 15 ರಂದು ವಿಷು ಹಬ್ಬದಂದು ಬಲಪಂಥೀಯ ಕಾರ್ಯಕರ್ತರ ಮನೆಗಳಿಗೆ ಕ್ರಿಶ್ಚಿಯನ್ನರನ್ನು ಆಹ್ವಾನಿಸಲಾಗುತ್ತದೆ.
ಸಾಮಾನ್ಯ ಜನರು ಈ ಉಪಕ್ರಮವನ್ನು ಸ್ವಾಗತಿಸಿದರೆ, ಆಡಳಿತಾರೂಢ ಎಡಪಕ್ಷ ಮತ್ತು ಪ್ರತಿಪಕ್ಷ ಕಾಂಗ್ರೆಸ್ ಇದನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಬಿಜೆಪಿ ನಾಯಕರು ಹೇಳುತ್ತಾರೆ.
ಹೈದರಾಬಾದ್‌ನಲ್ಲಿ ನಡೆದ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಕೇರಳದ ಅಲ್ಪಸಂಖ್ಯಾತರಿಗೆ “ಸ್ನೇಹ ಸಂವಾದ”ಆಯೋಜಿಸುವಂತೆ ಪಕ್ಷದ ಕಾರ್ಯಕರ್ತರಲ್ಲಿ ಮೋದಿ ಹೇಳಿದ್ದರು.ಮೂರು ಈಶಾನ್ಯ ರಾಜ್ಯಗಳಲ್ಲಿನ ವಿಜಯದ ನಂತರ, ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು 2026 ರಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಕೇರಳದಲ್ಲಿ ಪಕ್ಷವು ಸಮ್ಮಿಶ್ರ ಸರ್ಕಾರವನ್ನು ರಚಿಸಲಿದೆ ಎಂದು ಹೇಳಿದರು.