

ಭಾರತದಲ್ಲಿ ವಿಶೇಷವಾದ ಗೌರವವನ್ನು ಹೋಳಿ ಹಬ್ಬಕ್ಕೆ ನೀಡಲಾಗುತ್ತದೆ. ಪರಸ್ಪರ ಬಣ್ಣ ಹಚ್ಚುವುದರ ಮೂಲಕ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ. ಆದರೆ ಇತ್ತೀಚೆಗೆ ಹೋಳಿ ಆಚರಣೆಯ ವೇಳೆ ಹುಡುಗರ ಗುಂಪೊಂದು ಯುವತಿಯ ಮೇಲೆ ಸಾಮೂಹಿಕವಾಗಿ ಕಿರುಕುಳ ನೀಡಿ ದೌರ್ಜನ್ಯ ಎಸಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ಇದೀಗಾ ಈ ಕಿರುಕುಳ ಮತ್ತು ದೌರ್ಜನ್ಯ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ವಿಡಿಯೋದಲ್ಲಿ ನಾಲ್ಕೈದು ಹುಡುಗರು ಆಕೆಯನ್ನು ಎಳೆದು ಮೈ ಮೇಲೆ ಬಣ್ಣ ಹಚ್ಚುವುದನ್ನು ಕಾಣಬಹುದು. ಮತ್ತೊಬ್ಬ ಆಕೆಯ ತಲೆಯ ಮೇಲೆ ಮೊಟ್ಟೆ ಒಡೆಯುವುದನ್ನು ಕಾಣಬಹುದು. ಜೊತೆಗೆ ಒಬ್ಬನಿಗೆ ಆಕೆ ಕಪಾಳಮೋಕ್ಷವನ್ನು ಮಾಡಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ಯುವತಿಯಿಂದ ಯಾವುದೇ ದೂರು ದಾಖಲಾಗದೇ ಇರುವುದರಿಂದ ಯುವಕರನ್ನು ಇಷ್ಟು ದಿನಗಳ ವರೆಗೆ ಬಂಧಿಸಿರಲ್ಲಿಲ್ಲ. ಆದರೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ಹೊರಬಂದ ಕಾರಣ ಯುವ ಪ್ರವಾಸಿ ಕೇಂದ್ರ ದೆಹಲಿಯ ಪಹರ್ಗಂಜ್ನಲ್ಲಿ ತಂಗಿದ್ದ ಮೂವರು ಯುವಕರನ್ನು ದೆಹಲಿ ಪೋಲಿಸರು ಬಂಧಿಸಿದ್ದಾರೆ.

ನಿನ್ನೆ (ಮಾರ್ಚ್ 10) ರಂದು ಬಾಂಗ್ಲಾದೇಶಕ್ಕೆ ತೆರಳಿರುವ ಈ ಜಪಾನಿ ಯುವತಿ ಮಾನಸಿಕ ಮತ್ತು ದೈಹಿಕವಾಗಿ ಸದೃಢವಾಗಿರುವುದಾಗಿ ಟ್ವೀಟ್ ಮಾಡಿದ್ದಾಳೆ ಎಂದು ಪೊಲೀಸರು ಹೇಳಿಕೆಯಿಂದ ತಿಳಿದುಬಂದಿದೆ. ಸ್ಥಳೀಯ ಗುಪ್ತಚರ ಮೂಲಕ ಆರೋಪಿಗಳನ್ನು ಗುರುತಿಸಿ, ಇದೀಗಾ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.