

ನವದೆಹಲಿ (ಮಾರ್ಚ್ 8, 2023): ಲಂಡನ್ ಪ್ರವಾಸದ ವೇಳೆ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಸರ್ಕಾರದ ವಿರುದ್ಧ ಸರಣಿ ವಾಗ್ದಾಳಿ ನಡೆಸುತ್ತಿರುವ ಕಾಂಗ್ರೆಸ್ ನಾಐಕ ರಾಹುಲ್ ಗಾಂಧಿ ಇದೀಗ ‘ಭಾರತದಲ್ಲಿ ಪ್ರಜಾಪ್ರಭುತ್ವ ಉಳಿಸಲು ಅಮೆರಿಕ ಹಾಗೂ ಯುರೋಪ್ ಮುಂದೆ ಬರಬೇಕು’ ಎಂದು ಕರೆ ಕೊಟ್ಟಿದ್ದಾರೆ.
ಏಕೆ ಸುಮ್ಮನಿದ್ದೀರಿ?ಯುರೋಪ್ ಹಾಗೂ ಅಮರಿಕ ಪ್ರಜಾಪ್ರಭುತ್ವದ ರಕ್ಷಕ ದೇಶಗಳು. ಭಾರತದಲ್ಲಿ ಪ್ರಜಾಪ್ರಭುತ್ವ ನಿಸ್ತೇಜಗೊಂಡಿದೆ ಎಂಬುದನ್ನು ಏಕೆ ಮರೆತಿವೆ?ರಾಹುಲ್ ಗಾಂಧಿ

ರಾಹುಲ್ ಆಡಿರುವ ಈ ಮಾತು ಭಾರಿ ವಿವಾದಕ್ಕೆ ಕಾರಣವಾಗಿದ್ದು, ‘ವಿದೇಶಿ ನೆಲದಲ್ಲಿ ರಾಹುಲ್ ಭಾರತವನ್ನು ಅವಮಾನ ಮಾಡುತ್ತಿದ್ದಾರೆ ಹಾಗೂ ಭಾರತದ ವಿಷಯಗಳಲ್ಲಿ ವಿದೇಶಿ ಹಸ್ತಕ್ಷೇಪಕ್ಕೆ ಮೊರೆ ಇಡುತ್ತಿದ್ದಾರೆ’ ಎಂದು ಬಿಜೆಪಿ ಕಿಡಿ ಕಾರಿದೆ.

ಬ್ರಿಟಿಷ್ ಕಾಲಮಾನ ಸೋಮವಾರ ಸಂಜೆ ಲಂಡನ್‌ನ ಚಾಥಮ್ ಹೌಸ್ ಚಿಂತಕರ ಚಾವಡಿಯಲ್ಲಿ ಮಾತನಾಡಿದ ರಾಹುಲ್, ‘ಯುರೋಪ್ ಹಾಗೂ ಅಮೆರಿಕ ಪ್ರಜಾಪ್ರಭುತ್ವದ ರಕ್ಷಕ ದೇಶಗಳು. ಭಾರತದಲ್ಲಿ ಪ್ರಜಾಪ್ರಭುತ್ವ ನಿಸ್ತೇಜಗೊಂಡಿದೆ ಎಂಬುದನ್ನು ಏಕೆ ಮರೆತಿವೆ?’ ಎಂದು ಪ್ರಶ್ನಿಸುವ ಮೂಲಕ ಪರೋಕ್ಷವಾಗಿ, ಭಾರತದಲ್ಲಿ ವಿದೇಶಗಳ ಹಸ್ತಕ್ಷೇಪವನ್ನು ಆಹ್ವಾನಿಸಿದ್ದಾರೆ. ‘ಭಾರತದಲ್ಲಿ ಪ್ರಜಾಪ್ರಭುತ್ವವು ಜಾಗತಿಕ ಹಾಗೂ ಸಾರ್ವಜನಿಕರ ಒಳಿತಿಗೆ ಇದೆ. ಇದು ನಮ್ಮ ಗಡಿಗಳ ಆಚೆಯೂ ಪರಿಣಾಮ ಬೀರುತ್ತದೆ. ಭಾರತೀಯ ಪ್ರಜಾಪ್ರಭುತ್ವವು ಕುಸಿದರೆ, ನನ್ನ ದೃಷ್ಟಿಯಲ್ಲಿ, ಭೂಮಿಯ ಮೇಲಿನ ಪ್ರಜಾಪ್ರಭುತ್ವವು ಅತ್ಯಂತ ಗಂಭೀರವಾದ, ಪ್ರಾಯಶ: ಮಾರಣಾಂತಿಕ ಹೊಡೆತವನ್ನು ಅನುಭವಿಸುತ್ತದೆ. ಆದ್ದರಿಂದ, ಇದು ನಮಗೆ ಮಾತ್ರವಲ್ಲ, ನಿಮಗೂ (ಪಾಶ್ಚಾತ್ಯ ದೇಶಗಳಿಗೂ) ಮುಖ್ಯವಾಗಿದೆ. ನಾವು ನಮ್ಮ ಸಮಸ್ಯೆಯನ್ನು ನಿಭಾಯಿಸುತ್ತೇವೆ. ಆದರೆ ಈ ಸಮಸ್ಯೆಯೂ ಜಾಗತಿಕ ಮಟ್ಟದಲ್ಲೂ ಪ್ರಭಾವ ಬೀರುತ್ತದೆ ಎಂದು ನೀವು ತಿಳಿದಿರಬೇಕು. ಅದರ ಬಗ್ಗೆ ನೀವು ಏನು ಮಾಡುತ್ತೀರಿ ಎಂಬುದು ನಿಮಗೆ ಬಿಟ್ಟದ್ದು. ಭಾರತದಲ್ಲಿ ಏನಾಗುತ್ತಿದೆ ಎಂಬುದರ ಬಗ್ಗೆ ನಿಮಗೆ ತಿಳಿದಿರಬೇಕು. ಪ್ರಜಾಪ್ರಭುತ್ವ ಮಾದರಿಯ ಕಲ್ಪನೆಯ ಮೇಲೆ ದಾಳಿ ಆಗುತ್ತಿದೆ ಮತ್ತು ಬೆದರಿಕೆ ಇದೆ. ಸಾಂವಿಧಾನಿಕ ಸಂಸ್ಥೆಗಳ ಮೇಲೆ ದಾಳಿ ನಡೆದಿದೆ’ ಎಂದು ಹೇಳಿದರು

ರಾಹುಲ್ ಹೇಳಿಕೆಗೆ ಖಾರವಾಗಿ ಪ್ರತಿಕ್ರಯಿಸಿದ ಬಿಜೆಪಿ ಮುಖಂಡ ರವಿಶಂಕರ ಪ್ರಸಾದ್, ‘ವಿದೇಶಿ ನೆಲದಲ್ಲಿ ರಾಹುಲ್ ಭಾರತವನ್ನು ಅವಮಾನ ಮಾಡುತ್ತಿದ್ದಾರೆ ಹಾಗೂ ಭಾರತದ ವಿಷಯಗಳಲ್ಲಿ ವಿದೇಶಿ ಹಸ್ತಕ್ಷೇಪಕ್ಕೆ ಮೊರೆ ಇಡುತ್ತಿದ್ದಾರೆ’. ಈ ಬಗ್ಗೆ ‘ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ನಾಯಕಿ ಸೋನಿಯಾ ಗಾಂಧಿ ಸ್ಪಷ್ಟನೆ ನೀಡಬೇಕು’ ಎಂದು ಆಗ್ರಹಿಸಿದ್ದಾರೆ.
ಕಾಂಗ್ರೆಸ್ ತಿರುಗೇಟು:ಈ ನಡುವೆ, ಪ್ರಸಾದ್ ವಿರುದ್ಧ ಕಿಡಿಕಾರಿರುವ ಕಾಂಗ್ರೆಸ್ ನಾಯಕರಾದ ಜೈರಾಂ ರಮೇಶ್ ಹಾಗೂ ಪವನ್ ಖೇರಾ, ‘ಪ್ರಸಾದ್ ಸಚಿವ ಸ್ಥಾನ ಕಳೆದುಕೊಂಡು ನಿರುದ್ಯೋಗಿ ಆಗಿದ್ದಾರೆ. ಹೀಗಾಗಿ ಮತ್ತೆ ಕಳೆದು ಹೋದ ಸ್ಥಾನ ಪಡೆಯಲು ತಮ್ಮ ನಾಯಕನ ಮೆಚ್ಚಿಸುವ ಮಾತು ಆಡುತ್ತಿದ್ದಾರೆ’ ಎಂದು ಟೀಕಿಸಿದ್ದಾರೆ.