

ಗಂಗಾವತಿ: ಮುಂಬರುವ 2023 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಕಾಂಗ್ರೆಸ್ ಪಕ್ಷಗಳಿಗೆ ಬಹುಮತ ಲಭಿಸುವುದಿಲ್ಲ. ಆದ್ದರಿಂದ ಕೆಆರ್‌ಪಿಪಿ ಪಕ್ಷ ಮಹತ್ವದ ಪಾತ್ರ ವಹಿಸಲಿದ್ದು ಖಚಿತವಾಗಿ ಸಮ್ಮಿಶ್ರ ಸರಕಾರ ರಚನೆಯಾಗಲಿದೆ ಎಂದು ಕೆಆರ್‌ಪಿ ಪಾರ್ಟಿ ಸಂಸ್ಥಾಪಕ ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ಹೇಳಿದರು.
ಅವರು ನಗರದ ಕನಕಗಿರಿ ರಸ್ತೆಯಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿಯ ಅಮಿತ್ ಷಾ ಸೇರಿ ಕಾಂಗ್ರೆಸ್‌ನ ಯಾವೊಬ್ಬ ಮುಖಂಡರ ಬಗ್ಗೆಯೂ ಟೀಕೆ ಮಾಡುವುದಿಲ್ಲ.ಇನ್ನೂ 17 ದಿನಗಳಲ್ಲಿ ಬಳ್ಳಾರಿಯ ಬಿಜೆಪಿ ಕೆಲ ಮುಖಂಡರು ನನ್ನ ಸಂಬಂಧಿಕರು ಕೆಆರ್‌ಪಿ ಪಾರ್ಟಿ ಸೇರಲಿದ್ದಾರೆ. ರಾಜ್ಯದ 40 ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲ್ಲುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗುತ್ತದೆ.

ಮುಖ್ಯವಾಗಿ ಕಲ್ಯಾಣ ಕರ್ನಾಟಕ ಹಾಗೂ ಉತ್ತರ ಕರ್ನಾಟಕ, ಕೋಲಾರ, ಚಿತ್ರದುರ್ಗಾ ಮತ್ತು ತುಮಕೂರು ಜಿಲ್ಲೆಯ ಕೆಲ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸಲಾಗುತ್ತದೆ. ಗಂಗಾವತಿಯಲ್ಲಿ ನಾನು ಸ್ಪರ್ಧೆ ಮಾಡುತ್ತಿದ್ದು ಇಲ್ಲಿ ಬಿಎಸ್.ಯಡಿಯೂರಪ್ಪನವರ ಪುತ್ರ ಸೇರಿ ಬಿಜೆಪಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ರಾಜ್ಯ ಮುಖಂಡರು ಅಥವಾ ಅವರ ಪುತ್ರರು ಸಂಬಂಧಿಕರು ನನ್ನ ವಿರುದ್ಧ ಸ್ಪರ್ಧೆ ಮಾಡಿದರೂ ಹೆದರುವ ಪ್ರಶ್ನೆ ಯೇ ಇಲ್ಲ. ಈಗಾಗಲೇ ಗಂಗಾವತಿ ಕ್ಷೇತ್ರದಲ್ಲಿ ಪಕ್ಷಾತೀತವಾಗಿ ಜನತೆ ನನಗೆ ಆಶೀರ್ವಾದ ಮಾಡುತ್ತಿದ್ದಾರೆ. ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಯುವ ಕಾರ್ಯಕರ್ತರು ಹಾಗೂ ಪ್ರಮುಖ ಮುಖಂಡರು ಕೆಆರ್‌ಪಿ ಪಾರ್ಟಿ ಸೇರಿ ನನಗೆ ಶಕ್ತಿ ತುಂಬಿದ್ದಾರೆ.

ರೈತರಿಗೆ ಯುವಜನರಿಗೆ, ಮಕ್ಕಳಿಗೆ ಮಹಿಳೆಯರಿಗೆ ದೀನ ದುರ್ಬಲರಿಗೆ, ಅಲ್ಪಸಂಖ್ಯಾತರಿಗೆ, ಮುಂದುವರಿದ ವರ್ಗಗಳಲ್ಲಿರುವ ಬಡ ಜನತೆಗೆ ಯೋಜನೆ ರೂಪಿಸಿ ಸಾಮಾಜಿಕ ಭದ್ರತೆ ಕಲ್ಪಿಸಲಾಗುತ್ತದೆ.
ಸುದ್ದಿಗೋಷ್ಠಿಯಲ್ಲಿ ಕೆಆರ್‌ಪಿ ಪಾರ್ಟಿ ಜಿಲ್ಲಾಧ್ಯಕ್ಷ ಮನೋಹರಗೌಡ, ಮುಖಂಡರಾದ ಅಲಿಖಾನ್, ಯಮನೂರ ಚೌಡ್ಕಿ, ರಾಜೇಶ್ವರಿ, ದುರುಗಪ್ಪ ಆಗೋಲಿ, ಅಮರಜ್ಯೋತಿ ನರಸಪ್ಪ, ರಾಮಕೃಷ್ಣ ಇಳಿಗೇರ್, ಸಂಗಮೇಶ ಬಾದವಾಡಗಿ, ಚಿಲಕಮುಕ್ಕಿ ಮಲ್ಲೇಶಪ್ಪ, ವಿರೇಶ ಸುಳೇಕಲ್, ಜಿಲಾನಿ ಪಾಷಾ, ಚಂದ್ರಶೇಖರಗೌಡ, ಶಿವು ಆದೋನಿ,
ಬಿಜೆಪಿ ಪಕ್ಷದ ಯುವ ಮುಖಂಡ ರವಿ ಬಾದಷಾ ಲಿಂಗರಾಜ ಕ್ಯಾಂಪ್, ಸೋಮನಾಥ ಕಂಪ್ಲಿ, ಸಿದ್ದಪ್ಪ, ಬಿ.ಆರ್.ಗೌಸ್, ಮೌಲ ಮನಿಯಾರ್, ಜಾಕೀರ್ ಬಿಚ್ಚಗತ್ತಿ, ಬಾಷಾ, ಮಹಮದ್ ಚಾವೂಸ್, ಪರಂಜ್ಯೋತಿ, ನಾಗರಾಜ ನಾಯಕ, ಸೇರಿ ನೂರಾರು ಯುವಕರು ಗಾಲಿ ಜನಾರ್ದನರೆಡ್ಡಿ ಸಮ್ಮುಖದಲ್ಲಿ ಕೆಆರ್‌ಪಿ ಪಾರ್ಟಿ ಸೇರ್ಪಡೆಗೊಂಡರು.
