

ಲಕ್ನೋ, ಫೆ. 25: ಕೊಲೆ ಪ್ರಕರಣವೊಂದರ ಸಾಕ್ಷಿಯು ಸಾರ್ವಜನಿಕರ ಎದುರಲ್ಲೇ ಕೊಲೆಗೀಡಾಗಿರುವ ಘಟನೆಯ ಬಗ್ಗೆ ವಿಧಾನಸಭೆಯಲ್ಲಿ ಕಠಿಣ ಪ್ರಶ್ನೆಗಳನ್ನು ಎದುರಿಸಿದ ಬಳಿಕ, ಕೆಂಡಾಮಂಡಲರಾದ ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಪ್ರತಿಪಕ್ಷ ನಾಯಕ ಅಖಿಲೇಶ್ ಯಾದವ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
‘‘ಸಂತ್ರಸ್ತನ ಕುಟುಂಬವು ಆರೋಪಿಸಿರುವ ಆತಿಕ್ ಅಹ್ಮದ್ ಸಮಾಜವಾದಿ ಪಕ್ಷದ ಕೃಪೆಯಿಂದ ನಡೆಯುತ್ತಿರುವ ಮಾಫಿಯಾದ ಭಾಗ ಹಾಗೂ ನಾವು ಅದರ ಬೆನ್ನೆಲುಬು ಮುರಿಯುವ ನಿಟ್ಟಿನಲ್ಲಿ ಮಾತ್ರ ಕೆಲಸ ಮಾಡಿದ್ದೇವೆ ಎನ್ನುವುದು ಸತ್ಯವಲ್ಲವೇ?’’ ಎಂದು ಅಖಿಲೇಶ್ ಯಾದವ್ರತ್ತ ಬೆರಳು ತೋರಿಸುತ್ತಾ ಯೋಗಿ ಆದಿತ್ಯನಾಥ್ ಹೇಳಿದರು.

‘‘ಸ್ಪೀಕರ್ ಸರ್, ಅವರು ಎಲ್ಲಾ ವೃತ್ತಿಪರ ಕ್ರಿಮಿನಲ್ಗಳು ಮತ್ತು ಮಾಫಿಯದ ಗಾಡ್ಫಾದರ್. ಅವರ ರಕ್ತನಾಳದಲ್ಲೇ ಅಪರಾಧ ಇದೆ. ನಾನು ಇದನ್ನು ಈ ಸದನದಲ್ಲಿ ಹೇಳುತ್ತಿದ್ದೇನೆ. ನಾವು ಈ ಮಾಫಿಯವನ್ನು ಮಟ್ಟ ಹಾಕುತ್ತೇವೆ’’ ಎಂದು ಮತ್ತೊಮ್ಮೆ ಯಾದವ್ರತ್ತ ಬೆರಳು ತೋರಿಸುತ್ತಾ ಮುಖ್ಯಮಂತ್ರಿ ಹೇಳಿದರು.

ತನ್ನನ್ನು ಯೋಗಿ ಎಂದು ಕರೆದುಕೊಳ್ಳುವ ಮುಖ್ಯಮಂತ್ರಿ 2017ರಲ್ಲಿ ಮುಖ್ಯಮಂತ್ರಿಯಾದ ಬಳಿಕ ಸಾರ್ವಜನಿಕವಾಗಿ ಈ ರೀತಿ ದೊಡ್ಡ ದನಿಯಲ್ಲಿ ಮಾತನಾಡಿರುವುದು ಅಪರೂಪವಾಗಿದೆ. ಅವರ ಮಾತುಗಳಿಗೆ ತಿರುಗೇಟು ನೀಡಿದ ಯಾದವ್ರ, ‘‘ಕ್ರಿಮಿನಲ್ಗಳು ನಿಮ್ಮವರು’’ ಎಂದರು. ಇದಕ್ಕೂ ಮೊದಲು, ‘‘ರಾಮ ರಾಜ್ಯ’’ದಲ್ಲಿರುವ ರಾಜ್ಯದ ಪೊಲೀಸರು ‘‘ಸಂಪೂರ್ಣ ವಿಫಲರಾಗಿದ್ದಾರೆ’’ ಎಂದು ಆರೋಪಿಸಿದ್ದರು.
‘‘ಹಾಡುಹಗಲಲ್ಲೇ ಗುಂಡಿನ ದಾಳಿ ಆಗುತ್ತಿದೆ, ಬಾಂಬ್ಗಳನ್ನು ಎಸೆಯಲಾಗುತ್ತಿದೆ. ಕೊಲೆ ಮೊಕದ್ದಮೆಯ ಸಾಕ್ಷಿಯೊಬ್ಬರನ್ನು ಕೊಲ್ಲಲಾಗಿದೆ. ಪೊಲೀಸರು ಏನು ಮಾಡುತ್ತಿದ್ದಾರೆ? ಸರಕಾರ ಏನು ಮಾಡುತ್ತಿದೆ? ಡಬಲ್ ಇಂಜಿನ್ಗಳು ಎಲ್ಲಿವೆ? ಇದು ಚಿತ್ರದ ಶೂಟಿಂಗೇ?’’ ಎಂದು ಯಾದವ್ ಪ್ರಶ್ನಿಸಿದ್ದರು.
ಮುಖ್ಯಮಂತ್ರಿ ಒಂದು ಹಂತದಲ್ಲಿ, ‘‘ನಿಮಗೆ ನಾಚಿಕೆಯಾಗಬೇಕು. ನಿಮ್ಮ ತಂದೆಗೆ ಗೌರವ ಕೊಡಲೂ ನಿಮಗೆ ಆಗಲಿಲ್ಲ’’ ಎಂದು ಅಖಿಲೇಶ್ ಯಾದವ್ ಮತ್ತು ಅವರ ತಂದೆ ಮುಲಾಯಮ್ ಸಿಂಗ್ ಯಾದವ್ ನಡುವಿನ ವಿರಸವನ್ನು ಉಲ್ಲೇಖಿಸುತ್ತಾ ಹೇಳಿದರು.
ಬಹುಜನ ಸಮಾಜ ಪಕ್ಷ (ಬಿಜೆಪಿ)ದ ಶಾಸಕರೊಬ್ಬರ ಕೊಲೆ ಪ್ರಕರಣದ ಸಾಕ್ಷಿಯನ್ನು ಶುಕ್ರವಾರ ಪ್ರಯಾಗ್ರಾಜ್ನಲ್ಲಿ ದುಷ್ಕರ್ಮಿಗಳು ಗುಂಡಿಟ್ಟು ಕೊಂದಿದ್ದಾರೆ. ಈ ಕೊಲೆಯು ಹಲವು ಸಿಸಿಟಿವಿ ಕ್ಯಾಮರಗಳಲ್ಲಿ ಸೆರೆಯಾಗಿದೆ. 2005ರಲ್ಲಿ ನಡೆದ ಶಾಸಕ ರಾಜು ಪಾಲ್ ಕೊಲೆಗೆ ಸಂಬಂಧಿಸಿದ ಪ್ರಕರಣದಲ್ಲಿ ಉಮೇಶ್ ಪಾಲ್ ಪ್ರಮುಖ ಸಾಕ್ಷಿಯಾಗಿದ್ದಾರೆ.
ಪ್ರಯಾಗ್ರಾಜ್ನ ಪ್ರಮುಖ ರಸ್ತೆಯೊಂದರಲ್ಲಿ ಕಾರಿನಿಂದ ಇಳಿದ ಉಮೇಶ್ ಪಾಲ್ ಮೇಲೆ ಅಜ್ಞಾತ ವ್ಯಕ್ತಿಯೊಬ್ಬ ಗುಂಡು ಹಾರಿಸಿದ್ದಾನೆ. ರಾಜ್ಯದ ಕಾನೂನು ಮತ್ತು ವ್ಯವಸ್ಥೆ ಪರಿಸ್ಥಿತಿ ಸುಧಾರಿಸುತ್ತಿದೆ ಎಂಬ ಆದಿತ್ಯನಾಥ್ ಸರಕಾರದ ಹೇಳಿಕೆಗಳನ್ನು ಈ ಘಟನೆ ಲೇವಡಿ ಮಾಡುವಂತಿದೆ ಎಂದು ಸಮಾಜವಾದಿ ಪಕ್ಷ ಹೇಳಿದೆ.