

ಅಂಗನವಾಡಿಗೆ ಹೋಗಿದ್ದಕ್ಕೆ ಉಳಿಯಿತು ಹೆಣ್ಣುಮಗುವಿನ ಜೀವ
ಕಾರವಾರ: ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಒಂದೇ ಕುಟುಂಬದ ನಾಲ್ವರನ್ನು ಕೊಚ್ಚಿ ಕೊಲೆ ಮಾಡಿರುವ ಘಟನೆ ಉತ್ತರ ಕನ್ನಡ (Uttara Kannada) ಜಿಲ್ಲೆಯ ಭಟ್ಕಳ ತಾಲೂಕಿನ ಹಾಡವಳ್ಳಿ ಗ್ರಾಮದ ಸಮೀಪ ನಡೆದಿದೆ.
ಕತ್ತಿಯಲ್ಲಿ ತಲೆ ಕಡಿದು ನಾಲ್ವರ ಕೊಲೆ ಮಾಡಲಾಗಿದೆ. ಶಂಭು ಭಟ್ (65) ಆತನ ಪತ್ನಿ ಮಾದೇವಿ ಭಟ್, ಮಗ ರಾಜೀವ್ ಭಟ್ (34) ಹಾಗೂ ಮಗನ ಪತ್ನಿ ಕುಸುಮಾ ಭಟ್ (30) ಕೊಲೆಯಾದವರು. ಕುಸುಮಾ ಭಟ್ ದಂಪತಿಯ ಚಿಕ್ಕ ಹೆಣ್ಣು ಮಗು ಅಂಗನವಾಡಿಗೆ ಹೋಗಿದ್ದರಿಂದ ಬದುಕುಳಿದಿದೆ.

ಸ್ಥಳಕ್ಕೆ ಪೊಲೀಸರು ಹಾಜರಾಗಿ ಪರಿಶೀಲನೆ ನಡೆಸಿದ್ದಾರೆ. ಆಸ್ತಿ ವಿಚಾರಕ್ಕೆ ಕೊಲೆ ನಡೆದಿದೆ ಎನ್ನಲಾಗಿದೆ. ಈ ಸಂಬಂಧ ಭಟ್ಕಳ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಶ್ರೀಧರ್ ಭಟ್, ವಿನಯ್ ಭಟ್, ವಿದ್ಯಾ ಭಟ್ ಆಕೆಯ ತಂದೆ ಹಾಗೂ ಸಹೋದರರಿಂದ ಹತ್ಯೆ ನಡೆದಿದೆ ಎಂದು ತಿಳಿದುಬಂದಿದೆ. ಶಂಭು ಭಟ್ ಅವರ ಮೊದಲ ಮಗ ಕಿಡ್ನಿ ವೈಫಲ್ಯದಿಂದ ಸಾವಾಗಿದ್ದರಿಂದ ಸೊಸೆ ವಿದ್ಯಾ ಭಟ್ ತವರು ಮನೆ ಸೇರಿದ್ದಳು. ಜೀವನಾಂಶ ಹಾಗೂ ಆಸ್ತಿ ನೀಡುವ ವಿಚಾರದಲ್ಲಿ ಶಂಭು ಭಟ್ರೊಂದಿಗೆ ವಿದ್ಯಾ ಭಟ್ ಕುಟುಂಬಸ್ಥರು ಗಲಾಟೆ ಮಾಡಿಕೊಂಡಿದ್ದರು. ಜೀವನಾಂಶ ಕೊಡಲು ನಿರಾಕರಿಸಿದ್ದರಿಂದ ರೊಚ್ಚಿಗೆದ್ದ ಹಿರಿಯ ಸೊಸೆ ಕುಟುಂಬದವರಿಂದ ಹತ್ಯೆ ಮಾಡಿಸಿ ಪರಾರಿಯಾಗಿದ್ದಾಳೆ.
ಭಟ್ಕಳ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ. ಶ್ರೀಧರ ಭಟ್ ಎಂಬಾತನನ್ನು ಭಟ್ಕಳ ಪೊಲೀಸರು ಬಂಧಿಸಿದ್ದಾರೆ. ಉಳಿದ ಆರೋಪಿಗಳಿಗಾಗಿ ಶೋಧಕಾರ್ಯ ಆರಂಭಿಸಿದ್ದಾರೆ.