

ಮಂಗಳೂರು: ನಿನ್ನೆ ತಡರಾತ್ರಿ ಬೈಕ್ ನಲ್ಲಿ ತೆರಳುತ್ತಿದ್ದ ಅಫ್ರಿದ್ ಎಂಬ ಯುವಕನ ಮೇಲೆ ನೀರ್ಮಾರ್ಗ ಮಲ್ಲೂರು ರಸ್ತೆಯಲ್ಲಿ ತಲ್ವಾರ್ ಬೀಸಿ ಕೊಲೆಗೆ ಯತ್ನಿಸಿದ ಮುಸುಕುದಾರಿ ಸಂಘಪರಿವಾರ ದುಷ್ಕರ್ಮಿಗಳ ವಿರುದ್ಧ FIR ದಾಖಲಿಸಿ ಬಂಧಿಸಬೇಕೆಂದು ಎಸ್ಡಿಪಿಐ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಯಾಸಿನ್ ಅರ್ಕುಳ ರವರು ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ಬಿಡುಗಡೆ ಗೊಳಿಸಿರುವ ಅವರು ದ.ಕ ಜಿಲ್ಲೆಯಲ್ಲಿ ಸಂಘಪರಿವಾರ ಸಂಘಟನೆಗಳು ನಿರಂತರವಾಗಿ ಕೋಮು ಗಲಭೆ ನಡೆಸಲು ಯತ್ನಿಸುತ್ತಲೆ ಇದೆ.ಕಳೆದ ವಾರ ಅಡ್ಯನಡ್ಕದಲ್ಲಿ ಶೈಕ್ಷಣಿಕ ಕಾರ್ಯಾಗಾರದ ಮೇಲೆ ಅನೈತಿಕ ಪೊಲೀಸ್ ಗಿರಿ ನಡೆಸಿದ ನಂತರ ಮೂಡುಶೆಡ್ಡೆಯಲ್ಲಿ ಎರಡು ಮುಸ್ಲಿಂ ಯುವಕರು ಸಂಚರಿಸುತ್ತಿದ್ದ ಬೈಕ್ ನ್ನು ಅಡ್ಡಗಟ್ಟಿ ದಾಳಿ ನಡೆಸಲಾಗಿತ್ತು. ಇದೀಗ ಆ ಘಟನೆ ಮಾಸುವ ಮುನ್ನವೇ ನಿನ್ನೆ ರಾತ್ರಿ ನೀರ್ಮಾರ್ಗದ ಮಲ್ಲೂರು ರಸ್ತೆಯಲ್ಲಿ ಅಫ್ರಿದ್ ಎಂಬ ಯುವಕ ಸಂಚರಿಸುತ್ತಿದ್ದ ಮುಸುಕುದಾರಿಗಳ ತಂಡ ತಲ್ವಾರ್ ಬೀಸಿ ಕೊಲೆಗೆ ಯತ್ನಿಸಿದೆ.

ಅಮಿತ್ ಷಾ ದ.ಕ ಜಿಲ್ಲೆ ಬೇಟಿಯ ನಂತರ ಅನೈತಿಕ ಗೂಂಡಾಗಿರಿ ಹೆಚ್ಚಾಗುತ್ತಲೇ ಇದೆ.ಚುನಾವಣೆಗೆ ಇನ್ನೂ ಕೆಲವೇ ತಿಂಗಳುಗಳು ಬಾಕಿ ಇರುವುದರಿಂದ ಜಿಲ್ಲೆಯಲ್ಲಿ ಕೋಮು ಗಲಭೆ ನಡೆಸಿ ಜನರನ್ನು ಭಾವನಾತ್ಮಕವಾಗಿ ಪ್ರಚೋದಿಸಿ ಅಧಿಕಾರ ಪಡೆಯಲು ಸಂಘಪರಿವಾರ ಯತ್ನಿಸುತ್ತಿರುವುದರ ಮುಂದುವರಿದ ಭಾಗವಾಗಿದೆ ಈ ಎಲ್ಲಾ ದಾಳಿಗಳು ನಡೆಯುತ್ತಿರುವುದು.ಸಂಘಪರಿವಾರ ದುಷ್ಕರ್ಮಿಗಳು ಇಂತಹ ಕೃತ್ಯ ನಡೆಸಿದಾಗ ಪೊಲೀಸ್ ಇಲಾಖೆ ಇವರ ವಿರುದ್ಧ ಮೃದು ಧೋರಣೆ ತಾಳಿ ಕೇಸ್ ದಾಖಲಿಸದೇ ಇರುವುದರಿಂದ ಅಥವಾ ಒತ್ತಡಕ್ಕೆ ಮಣಿದು ಹಾಕಿದರು ಸಣ್ಣಪುಟ್ಟ ಸೆಕ್ಷನ್ ಗಳನ್ನು ಹಾಕುವುದರಿಂದ ದುಷ್ಕರ್ಮಿಗಳಿಗೆ ಇನ್ನಷ್ಟು ದುಷ್ಕೃತ್ಯ ನಡೆಸಲು ಪ್ರೇರಣೆ ಸಿಕ್ಕಿದಂತಾಗಿದೆ.
ಹಾಗಾಗಿ ಪೋಲಿಸ್ ಇಲಾಖೆ ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೇ ನಿಷ್ಪಕ್ಷಪಾತ ರೀತಿಯಲ್ಲಿ ಪ್ರಕರಣ ದಾಖಲಿಸಿ ದುಷ್ಕರ್ಮಿಗಳ ಹೆಡೆಮುರಿ ಕಟ್ಟಿ ಜಿಲ್ಲೆಯ ಶಾಂತಿ ಸೌಹಾರ್ದಯನ್ನು ಕಾಪಾಡಬೇಕೆಂದು ಅವರು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
