

ಕೇರಳ: ‘ ವೈದ್ಯರೇ (Doctors) ಅಪ್ಪಿತಪ್ಪಿ ತಪ್ಪು ಮಾಡಿದರೆ ರೋಗಿಗಳ ಗತಿ ಏನಾಗಬಹುದು ಎಂದು ಯೋಚಿಸಿದ್ದೀರಾ? ಕೇರಳದಲ್ಲಿ ಇಂತಹ ಒಂದು ಭಾಯಾನಕ ಘಟನೆ ನಡೆದಿದೆ. ರೋಗಿ ಹೇಳಿದ್ದೆ ಒಂದು, ವೈದ್ಯ ಮಾಡಿದ್ದು ಇನ್ನೊಂದು. ಕೇರಳದ (Kerala) ಕಕ್ಕೋಡಿಯ ಸಜಿನಾ ಸುಕುಮಾರನ್ (60) ಅವರು ತಮ್ಮ ಎಡಗಾಲಿನ ಹಿಮ್ಮಡಿಯ ನರಕ್ಕೆ ಗಾಯವಾಗಿತ್ತೆಂದು ಮಾವೂರು ರಸ್ತೆಯಲ್ಲಿರುವ ರಾಷ್ಟ್ರೀಯ ಆಸ್ಪತ್ರೆಯ ಡಾ.ಬೆಹಿರ್ಶನ್ ಅವರ ಬಳಿ ಚಿಕಿತ್ಸೆ ಪಡೆಡಿದ್ದರು. ನಂತರ ಶಸ್ತ್ರ ಚಿಕಿತ್ಸೆ (Operation) ಮಾಡಿಕೊಳ್ಳಲು ಮುಂದಾದ ಸುಜಿನ ಅವರಿಗೆ ಒಂದು ಶಾಕ್ ಕಾದಿತ್ತು!

ತಮ್ಮ ಎಡಗಾಲಿನ ಹಿಮ್ಮಡಿಯಲ್ಲಿ ನೋವು ಎಂದು ಶಸ್ತ್ರ ಚಿಕಿತ್ಸೆಗೆ ಒಪ್ಪಿದ ಸುಜಿನ ಶಸ್ತ್ರ ಚಿಕಿತ್ಸೆ ನಂತರ ಎದ್ದು ನೋಡಿದಾಗ ಎಡಗಾಲಿನ ಬದಲು ಬಲಗಾಲಿಗೆ ಆಪರೇಷನ್ ಮಾಡಿರುವುದು ತಿಳಿದು ಬಂದಿದೆ. ಒಂದು ವರ್ಷದ ಹಿಂದೆ ಸಜಿನಾ ಅವರಿಗೆ ತಮ್ಮ ಎಡಕಾಲು ಬಾಗಿಲಿಗೆ ಸಿಕ್ಕಿ ಗಾಯವಾಗಿತ್ತಂತೆ. ನೋವು ಕಡಿಮೆಯಾಗದ ಕಾರಣ ವೈದ್ಯರ ಮೊರೆ ಹೋಗಿದ್ದಾರೆ. ಮೊದಲು ಖಾಸಗಿ ಕ್ಲಿನಿಕ್ನಲ್ಲಿ ಡಾ.ಬೆಹಿರ್ಶನ್ ಬಳಿ ಚಿಕಿತ್ಸೆ ಪಡೆದು ನಂತರ ಫೆ.20 ರಂದು ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಮಂಗಳವಾರ (ಫೆ.21) ಡಾ.ಬೆಹಿರ್ಶನ್ ಅವರೇ ಸಜಿನಾ ಅವರ ಶಸ್ತ್ರಚಿಕಿತ್ಸೆ ಮಾಡಿದರು.

“ನನಗೆ ಪ್ರಜ್ಞೆ ಬಂದಾಗ, ನನ್ನ ಬಲಗಾಲು ಭಾರವಾದಂತನಿಸಿತು. ನಾನು ನನ್ನ ಎಡಗಾಲಿನ ನೋವಿಗೆ ಶಸ್ತ್ರ ಚಿಕಿತ್ಸೆ ಪಡೆದುಕೊಳ್ಳಲು ಒಪ್ಪಿಗೆ ನೀಡಿದ್ದೆ ಆದರೆ ಎದ್ದು ನೋಡಿದಾಗ ನನ್ನ ಬಲಗಾಲನ್ನು ಆಪರೇಟ್ ಮಾಡಿದ್ದರು. ನನ್ನ ಬಲಗಾಲಿಗೆ ಶಸ್ತ್ರಚಿಕಿತ್ಸೆ ಮಾಡಿರುವುದನ್ನು ನೋಡಿ ನಾನು ಆಘಾತಕ್ಕೊಳಗಾಗಿದ್ದೆ. ತಕ್ಷಣ ನರ್ಸ್ಗೆ ಕರೆ ಮಾಡಿ ವೈದ್ಯರನ್ನು ಕರೆಯುವಂತೆ ಕೇಳಿಕೊಂಡೆ ಆಗಲೇ ಅವರಿಗೂ ಆದ ತಪ್ಪಿನ ಅರಿವಾಗಿದ್ದು. “ಯಾವುದೇ ತೊಂದರೆಗಳಿಲ್ಲದ ತನ್ನ ಬಲಗಾಲಿಗೆ ಯಾವ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದು ತನಗೆ ತಿಳಿದಿಲ್ಲ” ಎಂದು ಸಜಿನಾ ಹೇಳಿದರು.
“ನನ್ನ ತಾಯಿಯ ಬಲಗಾಲಿನಲ್ಲಿಯೂ ಬ್ಲಾಕ್ ಆಗಿದೆ ಎಂಬುದು ವೈದ್ಯರ ಮೊದಲ ಪ್ರತಿಕ್ರಿಯೆಯಾಗಿತ್ತು. ಆದರೆ ಅವರು ಆ ಕಾಲಿನ ಬ್ಲಾಕ್ ಅನ್ನು ಪತ್ತೆಹಚ್ಚಲು ಯಾವುದೇ ರೀತಿಯ ಎಕ್ಸ್-ರೇ ಅಥವಾ ಸ್ಕ್ಯಾನ್ ತೆಗೆದುಕೊಂಡಿರಲಿಲ್ಲ” ಎಂದು ಸುಜಿನ ಅವರ ಮಗಳು ತಿಳಿಸಿದ್ದಾರೆ.

ಈ ಕುರಿತು ಡಿಎಂಒ ಹಾಗೂ ಆರೋಗ್ಯ ಸಚಿವರಿಗೆ ದೂರು ಸಲ್ಲಿಸಿದ್ದೇವೆ ಎಂದು ಸುಜಿನಾ ಅವರ ಸಂಬಂಧಿಕರು ತಿಳಿಸಿದ್ದಾರೆ. ಆದರೆ ಮಹಿಳೆಗೆ ಎರಡೂ ಕಾಲುಗಳಲ್ಲಿ ಸಮಸ್ಯೆ ಇತ್ತು ಶಸ್ತ್ರಚಿಕಿತ್ಸೆಗೂ ಮುನ್ನ ಈ ಬಗ್ಗೆ ಸಜಿನಾ ಮತ್ತು ಅವರ ಪತಿಗೆ ತಿಳಿಸಿದ್ದೇವೆ ಎಂದು ಎಂದು ಆಸ್ಪತ್ರೆಯ ಅಧಿಕಾರಿಗಳು ಹೇಳಿದ್ದಾರೆ.