

ನವದೆಹಲಿ: ಎಐಎಂಐಎಂ (AIMIM) ಮುಖ್ಯಸ್ಥ ಅಸಾದುದ್ದೀನ್ ಓವೈಸಿ (Asaduddin Owaisi) ಅವರ ದೆಹಲಿಯಲ್ಲಿರುವ ನಿವಾಸದ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ ಘಟನೆ ನಡೆದಿದೆ.
ಘಟನೆ ನಡೆದಾಗ ಓವೈಸಿ ದೆಹಲಿಯ (Delhi) ನಿವಾಸದಲ್ಲಿರಲಿಲ್ಲ. ಬದಲಿಗೆ ಜೈಪುರಕ್ಕೆ ಕಾರ್ಯನಿಮಿತ್ತ ತೆರಳಿದ್ದರು. ಈ ಬಗ್ಗೆ ಅಸಾದುದ್ದೀನ್ ಓವೈಸಿ ಸರಣಿ ಟ್ವೀಟ್ ಮಾಡಿದ್ದಾರೆ.

ಟ್ವೀಟ್ನಲ್ಲಿ ಏನಿದೆ?: ನನ್ನ ದೆಹಲಿ ನಿವಾಸದ ಮೇಲೆ ಮತ್ತೆ ದಾಳಿ ನಡೆದಿದೆ. 2014ರಿಂದ ಇದು ನಾಲ್ಕನೇ ಘಟನೆ ಎಂದು ಕಿಡಿಕಾರಿದರು.

ದುಷ್ಕರ್ಮಿಗಳ ಗುಂಪೊಂದು ಕಲ್ಲು ತೂರಾಟ ನಡೆಸಿದ್ದರಿಂದ ಕಿಟಕಿಗಳು ಮುರಿದು ಬಿದ್ದಿವೆ. ಈ ಬಗ್ಗೆ ಮನೆಯಲ್ಲಿದ್ದ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಅಷ್ಟೇ ಅಲ್ಲದೇ ಸಿಬ್ಬಂದಿ ಘಟನೆಗೆ ಸಂಬಂಧಿಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದೂರಿನ ಹಿನ್ನೆಲೆಯಲ್ಲಿ ಹೆಚ್ಚುವರಿ ಡಿಸಿಪಿ ನೇತೃತ್ವದ ದೆಹಲಿ ಪೊಲೀಸರ ತಂಡ ಓವೈಸಿ ನಿವಾಸಕ್ಕೆ ಭೇಟಿ ನೀಡಿದ್ದು, ಸ್ಥಳದಿಂದ ಸಾಕ್ಷ್ಯ ಸಂಗ್ರಹಿಸಿದೆ.
ಹೈಸೆಕ್ಯುರಿಟಿ ವಲಯದಲ್ಲಿ ಕಲ್ಲು ತೂರಾಟ ನಡೆದಿರುವುದು ಕಳವಳಕಾರಿ ಎಂದಿರುವ ಓವೈಸಿ, ಕೂಡಲೇ ಆರೋಪಿಗಳನ್ನು ಬಂಧಿಸುವಂತೆ ಪೊಲೀಸರನ್ನು ಒತ್ತಾಯಿಸಿದ್ದಾರೆ.