

ಉಡುಪಿ: ಇನ್ನೆರಡು ದಿನಗಳಲ್ಲಿ ನಾರಾಯಣ ಗುರು ನಿಗಮ ರಚನೆ ಮಾಡುವುದಾಗಿ ಘೋಷಣೆ ಮಾಡುತ್ತೇನೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಟ್ಟೀಟ್ ಮೂಲಕ ತಿಳಿಸಿದ್ದಾರೆ.
ನಾರಾಯಣ ಗುರು ನಿಗಮ ರಚನೆಯ ವಿಚಾರದಲ್ಲಿ ಯಾರಿಗೂ ಯಾವುದೇ ಆತಂಕ ಬೇಡ. ಮನ್ನಿಸಿ.. ಇನ್ನೆರಡು ದಿನಗಳಲ್ಲಿ ನಿಗಮ ಘೋಷಿಸುತ್ತೇವೆ. ಜವಾಬ್ದಾರಿ ನನ್ನದು ಎಂದು ಟ್ವೀಟ್ ಮಾಡಿದ್ದಾರೆ.

ಬಿಲ್ಲವ, ಈಡಿಗ ಸೇರಿದಂತೆ 26 ಉಪಪಂಗಡಗಳ ನಾರಾಯಣಗುರು ನಿಗಮ ರಚನೆ ಕುರಿತು ಬಹುದಿನಗಳಿಂದ ನಿರಂತರವಾಗಿ ಬೇಡಿಕೆ ಇದ್ದು ಅದು ಈ ಬಾರಿಯ ಬಜೆಟ್ನಲ್ಲೂ ಈಡೇರದ ಹಿನ್ನೆಲೆಯಲ್ಲಿ ಬಿಲ್ಲವ ಸಮುದಾಯದಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಕೆಲವು ದಿನಗಳ ಹಿಂದೆ ಇಂಧನ ಸಚಿವ ಸುನೀಲ್ ಕುಮಾರ್ ಮತ್ತು ಶಾಸಕ ರಘುಪತಿ ಭಟ್ ನೇತೃತ್ವದಲ್ಲಿ ಬಿಲ್ಲವ ಸಮಾಜದ ಗಣ್ಯರ ನಿಯೋಗವೊಂದು ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಗಿತ್ತು. ಈ ವೇಳೆ ಫೆಬ್ರವರಿಯಲ್ಲಿ ಮಂಡಿಸುವ ಬಜೆಟ್ನಲ್ಲಿ ಈ ಬಗ್ಗೆ ಘೋಷಣೆ ಮಾಡುವುದಾಗಿ ಸಿಎಂ ಭರವಸೆ ನೀಡಿದ್ದರು. ಆದರೆ ಶುಕ್ರವಾರ ಸಿಎಂ ಮಂಡಿಸಿದ ಬಜೆಟ್ ನಲ್ಲಿ ನಿಗಮ ಘೋಷಣೆ ಮಾಡದಿರುವುದು ಬಿಲ್ಲವ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ ಟ್ವೀಟ್ ಮೂಲಕ ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭರವಸೆ ನೀಡಿದ್ದಾರೆ. ಹಾಗೂ ಇನ್ನೆರಡು ದಿನಗಳಲ್ಲಿ ನಿಗಮ ಘೋಷಿಸುತ್ತೇವೆ ಎಂದು ತಿಳಿಸಿದ್ದಾರೆ.