

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಈ ಬಾರಿ ಮಂಡಿಸಿದ ರಾಜ್ಯ ಬಜೆಟ್ (Karnataka Budget 2023) ನಲ್ಲಿ ಪ್ರತಿ ಗ್ರಾಮ ಪಂಚಾಯತ್‍ಗೆ 22 ರಿಂದ 60 ಲಕ್ಷ ಅನುದಾನವನ್ನು ಘೋಷಣೆ ಮಾಡಿದ್ದಾರೆ.
ವಿಕೇಂದ್ರೀಕೃತ ಆಡಳಿತ ವ್ಯವಸ್ಥೆಯನ್ನು ಸಶಕ್ತಗೊಳಿಸಲು ಮತ್ತು ಜನರಿಗೆ ಗ್ರಾಮ ಪಂಚಾಯಿತಿಗಳ ಮುಖಾಂತರ ಸ್ಥಳೀಯವಾಗಿಯೇ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಅವಕಾಶ ಮಾಡಲಾಗುವುದು. ಪ್ರಸ್ತುತ ಗ್ರಾಮ ಪಂಚಾಯಿತಿಗಳಿಗೆ, ಜನಸಂಖ್ಯೆ ಆಧರಿಸಿ 12 ಲಕ್ಷ ರೂ. ಗಳಿಂದ 35 ಲಕ್ಷ ರೂ. ಗಳವರೆಗೆ ರಾಜ್ಯ ಸರ್ಕಾರದಿಂದ ಅನುದಾನ ನೀಡಲಾಗುತ್ತಿದೆ.

2023-24ನೇ ಸಾಲಿನಲ್ಲಿ ಪ್ರತಿ ಗ್ರಾಮ ಪಂಚಾಯಿತಿ (Grama Panchayat) ಗೆ 22 ರಿಂದ 60 ಲಕ್ಷ ರೂ. ಗಳಷ್ಟು ಅನುದಾನ ಲಭ್ಯಪಡಿಸಲು 780 ಕೋಟಿ ರೂ. ಗಳ ಒಂದು ಬಾರಿಯ ವಿಶೇಷ ಅನುದಾನ ಒದಗಿಸಲಾಗುವುದು. ಗ್ರಾಮೀಣ ರಸ್ತೆಗಳ ಸುಧಾರಣೆಗಾಗಿ ಸರ್ಕಾರವು ಹೆಚ್ಚಿನ ಮಹತ್ವವನ್ನು ನೀಡಿದೆ. ಪ್ರಸಕ್ತ ಸಾಲಿನಲ್ಲಿ 2,070 ಕೋಟಿ ರೂ. ಗಳ ವೆಚ್ಚದಲ್ಲಿ 4,504 ಕಿ.ಮೀ. ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದೆ.

ಗ್ರಾಮೀಣ ಭಾಗದ ರಸ್ತೆಗಳ ಮತ್ತು ಕೃಷಿ ಭೂಮಿಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಅಭಿವೃದ್ಧಿಗಾಗಿ, ನರೇಗಾ ಜೊತೆಗೆ ಸಂಯೋಜಿಸಿ ಪ್ರತಿ ವಿಧಾನ ಸಭಾ ಕ್ಷೇತ್ರಕ್ಕೆ 25 ಕಿ.ಮೀ. ನಂತೆ ಒಟ್ಟಾರೆಯಾಗಿ 5,000 ಕಿ.ಮೀ. ರಸ್ತೆಯನ್ನು ಅಭಿವೃದ್ಧಿಪಡಿಸಲು 300 ಕೋಟಿ ರೂ. ವೆಚ್ಚ ಮಾಡಲಾಗುವುದು ಎಂದು ಸಿಎಂ ತಿಳಿಸಿದರು.