

ನವದೆಹಲಿ: ನಮ್ಮ ಸರ್ಕಾರದಲ್ಲಿ ಭ್ರಷ್ಟಾಚಾರ (Corruption) ಇಲ್ಲ ಅಂತ ನಾನು ಹೇಳುವುದಿಲ್ಲ. ವ್ಯವಸ್ಥೆಯಲ್ಲೆ ಭ್ರಷ್ಟಾಚಾರ ಸೇರಿ ಹೋಗಿದೆ ಎಂದು ಬಿಜೆಪಿ (BJP) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ (CT Ravi) ಹೇಳಿದ್ದಾರೆ.
ಕಾಂಗ್ರೆಸ್ (Congress) ಭ್ರಷ್ಟಾಚಾರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ಭ್ರಷ್ಟಾಚಾರದ ಪಿತಾಮಹ. ಭ್ರಷ್ಟಾಚಾರದ ಬೀಜ ದೇಶದಲ್ಲಿ ಬಿತ್ತಿದ್ದು ಮೊದಲು ಅವರೇ ಎಂದು ತಿರುಗೇಟು ನೀಡಿದರು.

ನಮ್ಮ ಸರ್ಕಾರದ ವಿರುದ್ಧ ಕಾಂಗ್ರೆಸ್ ಭ್ರಷ್ಟಾಚಾರದ ಆರೋಪ ಮಾಡುತ್ತಲೇ ಬರುತ್ತಿದೆ. ಆರೋಪ ಮಾಡುವುದು ಬಿಟ್ಟು ಆಧಾರಗಳಿದ್ದರೆ ಕೋರ್ಟ್ಗೆ ಹೋಗಲಿ. 40% ಆರೋಪ ಮಾಡಿದ ಕಾಂಗ್ರೆಸ್ ಏನು ಮಾಡಿತು? ಏನೂ ಮಾಡಲಿಲ್ಲ? ಆಕಾಶ, ಭೂಮಿ, ಪಾತಾಳದಲ್ಲಿ ಭ್ರಷ್ಟಾಚಾರ ಮಾಡಿದ ಕೀರ್ತಿ ಕಾಂಗ್ರೆಸ್ ನಾಯಕರ ಮೇಲಿದೆ ಎನ್ನುವುದು ಉಸ್ತುವಾರಿ ರಣದೀಪ್ ಸುರ್ಜೆವಾಲಾಗೆ ಗೊತ್ತಿರಲಿ ಎಂದರು.

ನಮ್ಮ ಸರ್ಕಾರ ಪ್ರಣಾಳಿಕೆಯಲ್ಲಿ ಹೇಳದ ಕಾರ್ಯಗಳನ್ನು ಮಾಡಿದೆ. ಎಸ್ಟಿ ಮೀಸಲಾತಿ ಹೆಚ್ಚು ಮಾಡ್ತೀವಿ, ವಿದ್ಯಾನಿಧಿ ನೀಡುತ್ತೇವೆ ಎಂದು ಹೇಳಿರಲಿಲ್ಲ. ಆದರೂ ಹೊಸ ಯೋಜನೆಗಳನ್ನು ಘೋಷಿಸಿದೆ. ಬೂತ್ ಮಟ್ಟದಲ್ಲಿ ಬಿಜೆಪಿ ಕೆಲಸ ಮಾಡುತ್ತಿದೆ. ಇದು ನಮ್ಮ ಗೆಲುವಿಗೆ ಪೂರಕವಾಗಿದೆ. ಈ ತಿಂಗಳ ಕೊನೆ, ಮಾರ್ಚ್ ಮೊದಲ ವಾರದಲ್ಲಿ ಯಾತ್ರೆ ನಡೆಯಲಿದೆ. ದಾವಣಗೆರೆಯಲ್ಲಿ ಮಹಾ ಸಮಾವೇಶ ನಡೆಸುತ್ತಿದ್ದೇವೆ. ಸಾರ್ವತ್ರಿಕ ಚುನಾವಣೆಯಲ್ಲಿ ಬಹುಮತ ಕೊಡಿ ಎಂದು ಜನರಿಗೆ ಮನವಿ ಮಾಡುತ್ತಿದ್ದೇವೆ. ಇದು ಕಾಂಗ್ರೆಸ್ಗೆ ಸಹಿಸಲು ಸಾಧ್ಯವಾಗುತ್ತಿಲ್ಲ ಎಂದು ಟಾಂಗ್ ನೀಡಿದರು.
ಬಿಜೆಪಿ ಧರ್ಮ, ಜಾತಿ ಒಡೆಯುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಆದರೆ ಸ್ವಾತಂತ್ರ್ಯದ ಬಳಿಕ ದೇಶ ಒಡೆದಿದ್ದು ಯಾರು? ದೇಶದಲ್ಲಿ ಧರ್ಮ ಜಾತಿವಾರು ವಿಭಜನೆ ಆರಂಭಿಸಿದ್ದು ಕಾಂಗ್ರೆಸ್. ಭಾಷೆ ಆಧಾರದ ದೇಶ ವಿಭಜನೆ ಮಾಡಿದ್ದು ಕಾಂಗ್ರೆಸ್. ವಂಚನೆ ಮಾಡುವುದು ಕಾಂಗ್ರೆಸ್ ಹುಟ್ಟುಗುಣ. ಅವರಲ್ಲಿ ಇರುವುದನ್ನು ನಮ್ಮ ಮೇಲೆ ಹೇರುವ ಪ್ರಯತ್ನ ಮಾಡಲಾಗುತ್ತಿದೆ. ಏಕ್ ಭಾರತ್ ಶ್ರೇಷ್ಠ ಭಾರತ್ ಬಿಜೆಪಿ ಸಿದ್ಧಾಂತ ಎಂದರು.
