

ಅಲೋಕ್ ಕುಮಾರ್ ನೇತೃತ್ವದಲ್ಲಿ ಭದ್ರತೆ
ಕಲಬುರಗಿ: ಮಹಾ ಶಿವರಾತ್ರಿ (Mahashivaratri) ಯಂದು ಕಲಬುರಗಿಯ ವಿವಾದಿತ ಲಾಡ್ಲೆ ಮಶಾಕ್ ದರ್ಗಾದಲ್ಲಿನ ರಾಘವ ಚೈತನ್ಯ ಶಿವಲಿಂಗಕ್ಕೆ ಪೂಜೆ ಸಲ್ಲಿಸಲು ಕೋರ್ಟ್ ಅನುಮತಿ ನೀಡಿದೆ.. ಮತ್ತೊಂದೆಡೆ ಶಿವರಾತ್ರಿಯಂದೆ ಲಾಡ್ಲೆ ಮಶಾಕ್ ದರ್ಗಾದ ಉರುಸ್ ಇರುವ ಹಿನ್ನೆಲೆ ಆಳಂದ ಪಟ್ಟಣದ್ಯಾಂತ ಖಾಕಿ ಸರ್ಪಗಾವಲು ಹಾಕಿದ್ದಾರೆ. ಶಿವಲಿಂಗ (Shivalinga) ಕ್ಕೆ ಪೂಜೆ ಸಲ್ಲಿಸುವ ಕಾರ್ಯಕ್ರಮಕ್ಕೆ ಯಾವುದೇ ಅಡೆತಡೆಯಾಗದಂತೆ ನೋಡಿಕೊಳ್ಳಲು ಆಳಂದ ಪಟ್ಟಣದಲ್ಲಿ ಎಡಿಜಿಪಿ ಅಲೋಕ್ ಕುಮಾರ್ (ADGP Alok Kumar) ಖುದ್ದು ಫೀಲ್ಡಿಗಿಳಿತಿದ್ದಾರೆ.

ಕಳೆದ ವರ್ಷದ ಶಿವರಾತ್ರಿ (Shivaratri) ಹಬ್ಬದಂದು ಆಳಂದ ಪಟ್ಟಣದ ಲಾಡ್ಲೆ ಮಶಾಕ್ ದರ್ಗಾದಲ್ಲಿ ಇದೆ ಎಂದು ಹೇಳಲಾಗುವ ರಾಘವ ಚೈತನ್ಯ ಶಿವಲಿಂಗದ ಪೂಜೆ ಸಂದರ್ಭದಲ್ಲಿ ಹಿಂದೂ-ಮುಸ್ಲಿಂ ಸಮುದಾಯಗಳ ಮಧ್ಯೆ ನಡೆದ ಗಲಾಟೆ ಇನ್ನೂ ಮರೆಯಾಗಿಲ್ಲ. ಅದಾಗಲೇ ಮತ್ತೆ ಶಿವರಾತ್ರಿ ಬಂದಿದೆ. ಈ ಬಾರಿಯು ಕೂಡ ಶಿವರಾತ್ರಿಯಂದು ಲಾಡ್ಲೆ ಮಶಾಕ್ ದರ್ಗಾರದ ಉರುಸ್ ಮತ್ತು ರಾಘವ ಚೈತನ್ಯ ಶಿವಲಿಂಗಕ್ಕೆ ಪೂಜೆ ಸಲ್ಲಿಸಲು ಎರಡು ಸಮುದಾಯಗಳಿಗೆ ನ್ಯಾಯಾಲಯ ಅನುಮತಿ ನೀಡಿ ಕೆಲವೊಂದಿಷ್ಟು ಷರತ್ತುಗಳನ್ನು ವಿಧಿಸಿದೆ. ಅದರ ಪ್ರಕಾರ ಫೆಬ್ರವರಿ 18ರಂದು ಬೆಳಗ್ಗೆ 8 ಗಂಟೆಯಿಂದ 12 ಗಂಟೆಯವರೆಗೆ ಮುಸ್ಲಿಮರು ಉರುಸ್ ಆಚರಣೆಗೆ, ಮಧ್ಯಾಹ್ನ ಎರಡು ಗಂಟೆಯಿಂದ ಸಂಜೆ ಆರು ಗಂಟೆಯವರೆಗೆ ಹಿಂದೂಗಳಿಗೆ ಶಿವಲಿಂಗ ಪೂಜೆಗೆ ಅವಕಾಶ ನೀಡಿದೆ.

ಆದರೆ ಕಳೆದ ವರ್ಷದ ಘಟನೆ ಮರುಕಳಿಸಬಾರದು ಅನ್ನೋ ನಿಟ್ಟಿನಲ್ಲಿ ಆಳಂದ ಪಟ್ಟಣದ್ಯಾಂತ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜನೆ ಮಾಡಲಾಗಿದ್ದು, ಖುದ್ದು ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಫೀಲ್ಡಿಗೆ ಇಳಿಯಲಿದ್ದಾರೆ. ಎಡಿಜಿಪಿ ಅಲೋಕ್ ಕುಮಾರ್ ಇಂದು ಬೆಳಗ್ಗೆ 10ಕ್ಕೆ ಆಳಂದ ಪಟ್ಟಣದಲ್ಲಿ ರೂಟ್ ಮಾರ್ಚ್ ನಡೆಸಿ ಬಳಿಕ ಎರಡು ಸಮುದಾಗಳ ಪ್ರತ್ಯೇಕ ಸಭೆ ನಡೆಸಲಿದ್ದಾರೆ.

ಶಿವರಾತ್ರಿ ಹಬ್ಬದಂದು ಬೆಳಗ್ಗೆ ಲಾಡ್ಲೆ ಮಶಾಕ್ ದರ್ಗಾದ ಉರುಸ್ ನಿಮಿತ್ತ ಮುಸ್ಲಿಮ್ ಸಮುದಾಯದ 15 ಜನರು ಮಾತ್ರ ತೆರಳಿ ಪ್ರಾರ್ಥನೆ ಸಲ್ಲಿಸಬೇಕು. ಅದಾದ ಬಳಿಕ ಮಧ್ಯಾಹ್ನ ಶ್ರೀರಾಮ ಸೇನೆಯ ರಾಜ್ಯಾಧ್ಯಕ್ಷ ಆಂದೋಲ ಸ್ವಾಮೀಜಿ ನೇತೃತ್ವದಲ್ಲಿ 15 ಜನ ಹಿಂದೂಗಳು ರಾಘವ ಚೈತನ್ಯ ಶಿವಲಿಂಗಕ್ಕೆ ಸಂಜೆ 6 ಗಂಟೆಯ ಒಳಗೆ ಪೂಜೆ ಸಲ್ಲಿಸಬಹುದಾಗಿದೆ. ಕಳೆದ ವರ್ಷದ ಗಲಾಟೆಯ ಹಿನ್ನಲೆಯಲ್ಲಿ ಎಚ್ಚೆತ್ತ ಇಲಾಖೆ ಈ ಬಾರಿ ಸಾವಿರಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಿದ್ದು, ಡ್ರೋಣ್ ಕ್ಯಾಮೆರಾ (Drone Camera) ಅಳವಡಿಸಲಾಗ್ತಿದೆ. ಅಲ್ಲದೇ ಆಳಂದ ಪಟ್ಟಣಾದ್ಯಂತ 12 ಚೆಕ್ ಪೊಸ್ಟ್ ನಿರ್ಮಿಸಿ ಸವಾರರ ಮೇಲೆ ನಿಗಾ ವಹಿಸೋದಕ್ಕೆ ಮುಂದಾಗಿದೆ. ಇದೆಲ್ಲವನ್ನು ಖುದ್ದು ಅಲೋಕ್ ಕುಮಾರ್ ವೀಕ್ಷಣೆ ಮಾಡಲಿದ್ದಾರೆ.

ಒಟ್ಟನಲ್ಲಿ ಕಳೆದ ವರ್ಷ ನಡೆದ ಘಟನೆಯನ್ನು ಮರುಕಳಿಸದಂತೆ ನೋಡಿಕೊಳ್ಳಲು ಪೋಲೀಸ್ ಇಲಾಖೆ ಈ ಬಾರಿ ಆಳಂದ ಪಟ್ಟಣದಾದ್ಯಂತ ಹಗಲು ರಾತ್ರಿ ಕಟ್ಟೆಚ್ಚರ ವಹಿಸೋದಕ್ಕೆ ಮುಂದಾಗಿದೆ.

