

ಚೆನ್ನೈ: ಕೊಯಮತ್ತೂರಿನಲ್ಲಿ ಕಾರು ಬಾಂಬ್ (Coimbatore Car Bomb Blast) ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು (Tamil Nadu), ಕೇರಳ (Kerala) ಹಾಗೂ ಕರ್ನಾಟಕದ (Karnataka) ಅನೇಕ ಕಡೆಗಳಲ್ಲಿ ಎನ್ಐಎ (NIA) ದಾಳಿ ನಡೆಸಿದೆ.
ಕೊಯಮತ್ತೂರು ಆತ್ಮಾಹುತಿ ದಾಳಿಯಲ್ಲಿ ಚೆನ್ನೈ ನಗರ ಮತ್ತು ತಮಿಳುನಾಡಿನ ಹಲವು ಜಿಲ್ಲೆಗಳ 60 ಕ್ಕೂ ಹೆಚ್ಚು ಸ್ಥಳಗಳಲ್ಲಿ ಎನ್ಐಎ ದಾಳಿ ನಡೆಸಿದೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಶಂಕಿತ ಆತ್ಮಹತ್ಯಾ ಬಾಂಬರ್ ದಾಳಿಯ ತೀವ್ರತೆಯನ್ನು ಪರಿಗಣಿಸಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಹಲವು ಸ್ಥಳಗಳಲ್ಲಿ ಶೋಧ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಐಸಿಸ್ ಭಯೋತ್ಪಾದಕ ಸಂಘಟನೆಯನ್ನು ಬೆಂಬಲಿಸಿರುವ ಬಗ್ಗೆ ಶಂಕಿತರು ಇರುವ ಸ್ಥಳಗಳಲ್ಲಿ ಶೋಧ ನಡೆಸುತ್ತಿದೆ. ತಮಿಳುನಾಡಿನಲ್ಲಿ ಚೆನ್ನೈ, ಕೊಯಮತ್ತೂರು, ಮೈಲಾಡುತುರೈ, ತಿರುನಲ್ವೇಲಿ ಮತ್ತು ತೆಂಕಶಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ದಾಳಿ ನಡೆಸಲಾಗಿದೆ.

ತಮಿಳುನಾಡಿನ ಕೊಯಮತ್ತೂರಿನ ಉಕ್ಕಡಂ ದೇವಾಲಯದ ಬಳಿ ಕಾರ್ ಬ್ಲಾಸ್ಟ್ ನಡೆದಿತ್ತು. ಇಲ್ಲಿ ಒರ್ವ ವ್ಯಕ್ತಿ ಸಾವನ್ನಪ್ಪಿದ್ದ. ಈ ಸಂಬಂಧ ತನಿಖೆ ನಡೆಸಲಾಗಿತ್ತು. ಇದೇ ವೇಳೆ ಕರ್ನಾಟಕದ ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಬ್ಲಾಸ್ಟ್ ಆಗಿತ್ತು. ಈ ಪ್ರಕರಣದಲ್ಲಿ ಎನ್ಐಎ ಅಧಿಕಾರಿಗಳು ಶಾರೀಕ್ ಬಂಧನ ಮಾಡಿದ್ರು.

ತನಿಖೆ ನಡೆಸಿದ ವೇಳೆ ಕೊಯಮತ್ತೂರು ಬ್ಲಾಸ್ಟ್ಗೂ ಮಂಗಳೂರು ಕುಕ್ಕರ್ ಬ್ಲಾಸ್ಟ್ಗೂ ಸಂಬಂಧ ಇರೋದು ಕಂಡು ಬಂದಿತ್ತು. ಎರಡು ಪ್ರಕರಣ ತನಿಖೆ ನಡೆಸುತ್ತಿದ್ದ ಎನ್ಐಎ ಬೆಂಗಳೂರಿನ ಥಣಿಸಂದ್ರದಲ್ಲಿ ದಾಳಿ ನಡೆಸಿ ಮೊಹಮ್ಮದ್ ಆರೀಫ್ ಎಂಬಾತನನ್ನು ಬಂಧಿಸಿದ್ದರು. ಅದೇ ದಿನ ಮಹಾರಾಷ್ಟ್ರ ನಿವಾಸಿ ಹಮ್ರಾಝ್ ವರ್ಷಿದ್ ಶೇಖ್ ಎಂಬಾತನನ್ನ ಬಂಧನ ಮಾಡಲಾಗಿತ್ತು.
