

ಬೆಂಗಳೂರು : ಪರೇಶ್ ಮೆಸ್ತಾ ಪ್ರಕರಣ ಮತ್ತೆ ಇವತ್ತು ವಿಧಾನ ಪರಿಷತ್‌ನಲ್ಲಿ ಸದ್ದು ಮಾಡಿತು. ಆಡಳಿತ – ವಿಪಕ್ಷಗಳ ನಡುವೆ ಮಾತಿನ ಚಕಮಕಿ, ಗದ್ದಲ ಗಲಾಟೆಗೆ ಕಾರಣವಾಯಿತು.
ರಾಜ್ಯಪಾಲರ ಭಾಷಣದ ಮೇಲೆ ವಿಪಕ್ಷ ನಾಯಕರ ಹರಿಪ್ರಸಾದ್ ಭಾಷಣ ಮಾಡುತ್ತಿದ್ದರು. ಈ ವೇಳೆ ಪರೇಶ್ ಮೆಸ್ತಾ ಪ್ರಕರಣ ಉಲ್ಲೇಖ ಮಾಡಿದರು. ಬಿಜೆಪಿ ಅವರು ಇದನ್ನು ಕೊಲೆ ಅಂದರು. ಆದರೆ ಸಿಬಿಐ ಇದನ್ನ ಆಕಸ್ಮಿಕ ಸಾವು ಅಂತ ಹೇಳಿತು ಎಂದರು.

ಇದಕ್ಕೆ ಸಭಾ ನಾಯಕ ಕೋಟ ಶ್ರೀನಿವಾಸ ಪೂಜಾರಿ (Kota Srinivas Poojary) ವಿರೋಧ ವ್ಯಕ್ತಪಡಿಸಿದರು. ಬಾಯಿಗೆ ಬಂದ ಹಾಗೆ ಮಾತಾಡಬೇಡಿ ಎಂದರು. ಪರೇಶ್ ಮೆಸ್ತಾ (Paresh Mesta) ತಂದೆ ಏನ್ ಹೇಳಿದ್ದಾರೆ ನೋಡಿ ಅಂತ ಹರಿಪ್ರಸಾದ್ ವಿರುದ್ಧ ಕಿಡಿಕಾರಿದರು.
ಈ ವೇಳೆ ಮತ್ತೆ ಹರಿಪ್ರಸಾದ್ (BK Hariprasad) ಮಾತನಾಡಿ, ಪರೇಶ್ ಮೆಸ್ತಾ ಸಾವು ಮಾಡಿಸಿದ್ದೇ ಬಿಜೆಪಿ. ಇದು ಬಿಜೆಪಿ (BJP) ಪ್ರೇರಿತ ಕೊಲೆ ಎಂದರು. ಹರಿಪ್ರಸಾದ್ ಮಾತಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಆಕ್ಷೇಪ ವ್ಯಕ್ತಪಡಿಸಿದರು. ನಿಮ್ಮ ಮನಸ್ಸಿಗೆ ಬಂದ ಹಾಗೆ ಮಾತಾಡಬೇಡಿ. 23 ಜನ ಹಿಂದೂ ಸತ್ತಾಗ ಎಲ್ಲಿ ಹೋಗಿದ್ರಿ ನೀವು. ಪರೇಶ್ ಮೆಸ್ತಾ ಕೇಸ್‌ನಲ್ಲಿ ಅವರ ತಂದೆ ಏನು ಹೇಳಿದರು. ಏನೇನೋ ಮಾತಾಡಬೇಡಿ ಎಂದು ಮತ್ತೆ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಸದನದಲ್ಲಿ ಮಾತಿನ ಚಕಮಕಿ ನಡೀತು. ಆಡಳಿತ ಪಕ್ಷ-ವಿಪಕ್ಷ ನಡುವೆ ಗದ್ದಲ ಗಲಾಟೆ ಆಯ್ತು. ಈ ವೇಳೆ ನನಗೆ ರಕ್ಷಣೆ ಬೇಕು. ನನ್ನ ಮಾತಿಗೆ ಯಾರು ಅಡ್ಡಿ ಬರಬಾರದು. ಇಲ್ಲದೆ ಹೋದ್ರೆ ನಾನು ಧರಣಿ ಮಾಡುತ್ತೇನೆ ಎಂದ ಹರಿಪ್ರಸಾದ್ ಮುಂದಾದರು.

ಬಳಿಕ ಪೂಜಾರರನ್ನ ಸಭಾಪತಿಗಳು ಸಮಾಧಾನ ಮಾಡಿದರು. ಮಾತು ಮುಂದುವರೆಸಿದ ಹರಿಪ್ರಸಾದ್, ತಮ್ಮ ಕೆಲಸ ಮಾಡುವುದಕ್ಕೆ ಬಡವರ ಮಕ್ಕಳನ್ನು ಬಲಿ ಕೊಡೋಕೆ ಹೊರಟಿದ್ದಾರೆ. MLA ಮಕ್ಕಳು ಎಂಪಿ ಮಕ್ಕಳನ್ನು ರಕ್ಷಣೆ ಮಾಡಲು ಬಡವರ ಮಕ್ಕಳನ್ನ ಬಾವಿಗೆ ತಳುತ್ತೀರಾ? ಎಂದರು.

ಮತ್ತೆ ಪೂಜಾರಿ ಹರ್ಷಾ ಕೊಲೆ ಮಾಡಿದಾಗ ಕಾಂಗ್ರೆಸ್ ಅವರು ಖಂಡಿಸಿದ್ರಾ? ಎಂದರು. ಇದಕ್ಕೆ ನಾವು ಖಂಡಿಸಿದ್ದೇವೆ ಎಂದು ಹರಿಪ್ರಸಾದ್ ಹೇಳಿದರು. ಈ ವೇಳೆ ಮತ್ತೆ ಗದ್ದಲ ಗಲಾಟೆ ಆಯ್ತು.
