

ಎರಡು ದಿನಗಳ ಹಿಂದೆಯೇ ರಜನಿಕಾಂತ್ ಮಂಗಳೂರಿನಲ್ಲಿ (Mangalore) ಬೀಡುಬಿಟ್ಟಿದ್ದಾರೆ. ರಜನಿಕಾಂತ್ (Rajinikanth) ಮತ್ತು ಶಿವರಾಜ್ ಕುಮಾರ್ (Shivraj Kumar) ಕಾಂಬಿನೇಷನ್ ನ ‘ಜೈಲರ್’ (Jailer) ಸಿನಿಮಾದ ಶೂಟಿಂಗ್ ಮಂಗಳೂರಿನ ಪಿಲಿಕುಳದ (Pilikula) ಗುತ್ತಿನ ಮನೆಯಲ್ಲಿ ನಡೆಯುತ್ತಿದ್ದು, ಕರಾವಳಿಯನ್ನು ಬಿಂಬಿಸುವಂತಹ ದೃಶ್ಯಗಳನ್ನು ಇಲ್ಲಿ ಸೆರೆ ಹಿಡಿಯಲಾಗುತ್ತಿದೆ. ಮಾಹಿತಿಯ ಪ್ರಕಾರ ಈ ಸಿನಿಮಾದಲ್ಲಿ ಶಿವರಾಜ್ ಕುಮಾರ್ ನೆಗೆಟಿವ್ ಶೇಡ್ ಇರುವಂತಹ ಪಾತ್ರವನ್ನು ನಿರ್ವಹಿಸುತ್ತಿದ್ದಾರಂತೆ.


ಪಿಲಿಕುಳದ ಗುತ್ತಿನ ಮನೆಯು ಮಂಗಳೂರು ಹೊರವಲಯದಲ್ಲಿದ್ದು, ಇಲ್ಲಿ ಜೈಲರ್ ಸಿನಿಮಾಗಾಗಿಯೇ ವಿಶೇಷ ಸೆಟ್ ಅನ್ನು ಹಾಕಲಾಗಿದೆ. ಹಳ್ಳಿಯ ವಾತಾವರಣವನ್ನು ಬಿಂಬಿಸುವಂತಹ ಮತ್ತು ಕುಸ್ತಿ ಅಖಾಡವನ್ನು ಕೂಡ ಮನೆ ಒಳಗೆ ಸೃಷ್ಟಿ ಮಾಡಲಾಗಿದೆ. ಎತ್ತಿನ ಗಾಡಿ ಸೇರಿದಂತೆ ಹಲವು ಹಳ್ಳಿ ಸಂಸ್ಕೃತಿಯನ್ನು ಬಿಂಬಿಸುವಂತಹ ವಾತಾವರಣವನ್ನು ನಿರ್ಮಾಣ ಮಾಡಲಾಗಿದೆ.

ಇದೇ ಸ್ಥಳದಲ್ಲೇ ಎರಡು ದಿನಗಳ ಕಾಲ ಜೈಲರ್ ಸಿನಿಮಾದ ಚಿತ್ರೀಕರಣ ನಡೆಯಲಿದೆ. ಕುಸ್ತಿ ದೃಶ್ಯ ಸೇರಿದಂತೆ ಮಹತ್ವದ ಹಲವು ಸನ್ನಿವೇಶಗಳನ್ನು ಪಿಲಿಕುಳದ ಗುತ್ತಿನ ಮನೆಯ ಆವರಣದಲ್ಲೇ ಚಿತ್ರೀಕರಣ ಮಾಡಲಾಗುತ್ತದೆ. ಎರಡು ದಿನಗಳ ಹಿಂದೆಯೇ ಶಿವರಾಜ್ ಕುಮಾರ್ ಕೂಡ ರಜನಿಕಾಂತ್ ಅವರ ಟೀಮ್ ಸೇರಿಕೊಂಡಿದ್ದಾರೆ. ರಜನಿ ಜೊತೆಗೆ ಹರಟೆ ಹೊಡೆಯುತ್ತಿರುವ ಫೋಟೋ ಈಗಾಗಲೇ ಭಾರೀ ವೈರಲ್ ಆಗಿದೆ.

ಇದು ರಜನಿಕಾಂತ್ ನಟನೆಯ 169ನೇ ಸಿನಿಮಾವಾಗಿದ್ದು, ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದಲ್ಲಿ ಚಿತ್ರ ಮೂಡಿ ಬರಲಿದೆ. ತಮನ್ನಾ ನಾಯಕಿಯಾಗಿ ನಟಿಸುತ್ತಿದ್ದರೆ, ಶಿವರಾಜ್ ಕುಮಾರ್ ಸೇರಿದಂತೆ ಇನ್ನೂ ಹಲವು ಚಿತ್ರರಂಗದ ದಿಗ್ಗಜರು ಈ ಸಿನಿಮಾಗಾಗಿ ಒಂದಾಗಿದ್ದಾರೆ. ಅನಿರುದ್ಧ ರವಿಚಂದ್ರನ್ ಸಂಗೀತ ಸಂಯೋಜನೆಯಲ್ಲಿ ಹಾಡುಗಳು ಮೂಡಿ ಬರಲಿವೆ.