

ವಿಧಾನಸಭೆ: ರೈತರ ಸಾಲಮನ್ನಾ ಮಾಡಿದರೆ ದೇಶಕ್ಕೆ ಒಳ್ಳೆಯದಲ್ಲ ಅಂತಾ ಹೇಳುತ್ತಾರೆ. ಆದರೆ ಉದ್ಯಮಿಗಳ ಸಾಲ ಮನ್ನಾ ಮಾಡಿದ್ದೀರಲ್ಲ ಇದು ಸರಿಯೇ? ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅವರು ಪ್ರಶ್ನಿಸಿದರು. ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯದ ಮೇಲೆ ಮಾತನಾಡುವ ವೇಳೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ (Tejasvi Surya) ಹೇಳಿಕೆ ಪ್ರಸ್ತಾಪಿಸಿದ ಅವರು, ೧೨ ಲಕ್ಷಕ್ಕೂ ಹೆಚ್ಚು ಕೋಟಿ ಸಾಲ ಮನ್ನಾ ಮಾಡಿದ್ದೀರಿ. ಯಾವ ಕಾರಣಕ್ಕೆ ಉದ್ಯಮಿಗಳ ಸಾಲ ಮನ್ನಾ ಮಾಡಿದ್ದೀರಾ ಹೇಳಿ? ಇದು ಬಿಜೆಪಿಯವರ ಮೈಂಡ್ ಸೆಟ್ ಎಂದು ಖಾರವಾಗಿ ನುಡಿದರು. ನೀವು ನರೇಗಾ ಯೋಜನೆಯ ಹಣವನ್ನು ಕಡಿತ ಮಾಡಿದ್ದೀರಿ, ರಸಗೊಬ್ಬರದ ಸಬ್ಸಿಡಿಯನ್ನು ಕೂಡ ತೆಗೆದು ಹಾಕಿದ್ದೀರಿ. ಇನ್ನೆಲ್ಲಿ ರೈತರ ಆದಾಯ ದುಪ್ಪಟ್ಟಾಗುತ್ತದೆ ಎಂದು ಹೇಳಿದರು.

ಮೊದಲು ಗೋ ಹತ್ಯೆ ನಿಷೇಧ ಕಾನೂನು ವಾಪಸ್ ಪಡೆಯಿರಿ
ಗೋವಿನ ರಕ್ಷಣೆ ಆಗಿದೆ ಎಂದು ಹೇಳುತ್ತಾರೆ. ಆದರೆ ರಾಜ್ಯದಲ್ಲಿ ಗೋ ಶಾಲೆಗಳು ಜಾಸ್ತಿ ಇಲ್ಲ. ರೈತರಿಗೆ ಮಾರಲು ಆಗುತ್ತಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು. ಇದಕ್ಕೆ ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲ್ ಆಕ್ಷೇಪ ವ್ಯಕ್ತಪಡಿಸಿದಾಗ ಪಾಟೀಲರನ್ನು ಗದರಿಸಿದ ಸಿದ್ದರಾಮಯ್ಯ, ನೀವು ರೈತರಿದ್ದೀರಿ, ರೈತರ ಸಮಸ್ಯೆ ಅರ್ಥ ಮಾಡಿಕೊಳ್ಳಿ ಎಂದರು. ಗೋ ಹತ್ಯೆ ನಿಷೇಧ ಕಾಯಿದೆ ಹಿಂಪಡೆಯಿರಿ. ಮೊದಲಿನಂತೆಯೇ ಕಾಯಿದೆ ಇರಲಿ. ಅನುಪಯುಕ್ತ ರಾಸುಗಳನ್ನ ಮಾರಲು ಅವಕಾಶ ಮಾಡಿಕೊಡಿ ಎಂದು ಆಗ್ರಹಿಸಿದರು.
ಕೋಮುವಾದಿ ಅಜೆಂಡಾ ತರಲು ಗೋ ಹತ್ಯೆ ನಿಷೇಧ ಕಾಯಿದೆ ಜಾರಿ ಮಾಡಲಾಗಿದೆ. ಒಂದು ಹಸುವಿಗೆ 60 ರೂಪಾಯಿ ಕೊಡುತ್ತೀರಿ, ಇದು ಸಾಕಾಗುತ್ತಾ? ಈ ಮೊದಲು ನಿರುಪಯುಕ್ತ ಗೋವುಗಳನ್ನು ರೈತರು ಮಾರಾಟ ಮಾರಿಕೊಳ್ಳುತ್ತಿದ್ದರು. ಆದರೆ ಈಗ ಮಾರಾಟ ಮಾಡುವಂತಿಲ್ಲ ಎಂದು ಸಿದ್ದರಾಮಯ್ಯ ಹೇಳುವಾಗ ಮಧ್ಯಪ್ರವೇಶಿಸಿದ ಗೃಹಸಚಿವ ಆರಗ ಜ್ಞಾನೇಂದ್ರ, ಮಾರಾಟ ಮಾಡಬಹುದು ಎಂದರು.
ಕಾಯಿದೆ ಜಾರಿ ನಂತರ ಮಾರಾಟ ಮಾಡಲು ಅವಕಾಶ ಇಲ್ಲ ಕಣ್ರೀ ಎಂದು ಸಿದ್ದರಾಮಯ್ಯ ಅವರು ಗೃಹಸಚಿವರಿಗೆ ತಿರುಗೇಟು ನೀಡಿದರಲ್ಲದೆ, ಹೇ ಮಾಧುಸ್ವಾಮಿ, ಇವರಿಗೆ ಸ್ವಲ್ಪ ನೀವೇ ಹೇಳಿ ಕೊಡ್ರೀ ಎಂದರು. ಈ ವೇಳೆ, ಹಾಗಾದರೆ ಏನು ಮಾಡಬೇಕು ನೀವೇ ಹೇಳಿ ಸಿದ್ದರಾಮಯ್ಯ ನವರೇ ಎಂದು ಗೃಹಸಚಿವರು ಕೇಳಿದರು. ಇದಕ್ಕೆ ಉತ್ತರಿಸಿದ ಸಿದ್ದರಾಮಯ್ಯ, ಗೋ ಹತ್ಯೆ ನಿಷೇಧ ಕಾನೂನು ವಾಪಸ್ ಪಡೆಯಿರಿ, ಈ ಮೊದಲು ಇದ್ದಂತೆಯೇ ಇರಲಿ. ಮೊದಲು ಕಾನೂನು ವಾಪಸ್ ಪಡೆಯಿರಿ ಎಂದು ಆಗ್ರಹಿಸಿದರು.
ಸಚಿವ ಜೆ.ಸಿ.ಮಾಧುಸ್ವಾಮಿ ಬ್ಯಾಡ್ ಕೇಸ್ ಗುಡ್ ಲಾಯರ್
ರಾಜ್ಯಪಾಲರ ಭಾಷಣಕ್ಕೆ ಬನ್ನಿ ಎಂದು ಮಾಧುಸ್ವಾಮಿ ಹೇಳಿದರು. ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಬಗ್ಗೆ ನನಗೆ ಗೌರವವಿದೆ. ಅವರು ಬ್ಯಾಡ್ ಕೇಸ್ ಗುಡ್ ಲಾಯರ್. ನಾನು ವಕೀಲನಾಗಿದ್ದಾಗ ಓರ್ವ ಹಿರಿಯ ವಕೀಲರಿದ್ದರು. ಯಾವುದೇ ಬ್ಯಾಡ್ ಕೇಸ್ ಬಂದರೂ ಅವರ ಬಳಿ ಕಳಿಸುತ್ತಿದ್ದರು. 25 ಮಧ್ಯಂತರ ಅರ್ಜಿಗಳನ್ನು ಹಾಕುತ್ತಿದ್ದರು. ಜಡ್ಜ್ ಈ ಎಲ್ಲಾ ವಾದಗಳನ್ನು ಕೇಳಿ ತೀರ್ಪು ಕೊಡಬೇಕಿತ್ತು. ಇದು ಮುಗಿಯಲು 15ರಿಂದ 20 ವರ್ಷ ಸಮಯ ತೆಗೆದುಕೊಳ್ಳುತ್ತಿತ್ತು. ಅರ್ಜಿ ಹಾಕಿದವನು, ಮಕ್ಕಳು ಸತ್ತು, ಮೊಮ್ಮಕ್ಕಳ ಕಾಲಕ್ಕೆ ತೀರ್ಪು ಬರುತ್ತಿತ್ತು. ಹಾಗಾಗಿ ಗೆದ್ದವನು ಸೋತ-ಸೋತವನು ಸತ್ತ ಎಂದು ಹೇಳುತ್ತಿದ್ದೆವು ಎಂದರು.
