

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಕುರಿತು ಸಾಕ್ಷ್ಯಚಿತ್ರ ಹೊರತಂದು ವಿವಾದಕ್ಕೆ ಸಿಲುಕಿರುವ ಬಿಬಿಸಿ ಕಚೇರಿ ಮೇಲೆ ಆದಾಯ ತೆರಿಗೆ (Income Tax) ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ದೆಹಲಿ (New Delhi) ಹಾಗೂ ಮುಂಬೈನಲ್ಲಿರುವ (Mumbai) ಬಿಬಿಸಿ ಕಚೇರಿಗಳಲ್ಲಿ ಸರ್ವೇ ನಡೆಸಲಾಗಿದೆ.
BBC (ಬ್ರಿಟಿಷ್ ಬ್ರಾಡ್ಕಾಸ್ಟಿಂಗ್ ಕಾರ್ಪೊರೇಷನ್) ಒಳಗೊಂಡಿರುವ ಅಂತಾರಾಷ್ಟ್ರೀಯ ತೆರಿಗೆ ಮತ್ತು ಅಕ್ರಮಗಳ ಆರೋಪದ ಮೇಲೆ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಬಿಬಿಸಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅನೇಕ ಪತ್ರಕರ್ತರ ಮೊಬೈಲ್ ಹಾಗೂ ಲ್ಯಾಪ್ಟಾಪ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದು ಕೇವಲ ಸರ್ವೇ ಅಷ್ಟೆ. ನಮ್ಮ ಅಧಿಕಾರಿಗಳು, ಬಿಬಿಸಿ ಕಚೇರಿಯ ಅಕೌಂಟ್ ಬುಕ್ ಪರಿಶೀಲನೆ ಮಾಡಿದ್ದಾರೆ ಎಂದು ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.
2002ರ ಗುಜರಾತ್ ಗಲಭೆ ಕುರಿತು ‘ಇಂಡಿಯಾ: ದಿ ಮೋದಿ ಕ್ವೆಶ್ಚನ್’ ಎಂಬ ಸಾಕ್ಷ್ಯಚಿತ್ರ ನಿರ್ಮಿಸಿ ಬಿಬಿಸಿ ವಿವಾದಕ್ಕೆ ಸಿಲುಕಿತ್ತು. ಸೋಷಿಯಲ್ ಮೀಡಿಯಾದಲ್ಲಿ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಕ್ರಮವಹಿಸಿತ್ತು. ಈ ಸಂಬಂಧ ಯೂಟ್ಯೂಬ್, ಟ್ವಿಟ್ಟರ್ಗೆ ನಿರ್ದೇಶನ ನೀಡಿತ್ತು. ಅಷ್ಟೇ ಅಲ್ಲದೇ, ಬಿಬಿಸಿ ನಿಷೇಧಿಸಬೇಕು ಎಂದು ಹಿಂದೂಪರ ಸಂಘಟನೆಯ ಸದಸ್ಯರೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿತ್ತು.
