

ವಿಧಾನಮಂಡಲ (ಫೆ.14): ಮುಂಬರುವ ಚುನಾವಣೆಯ ಪ್ರಚಾರ ಸಭೆ, ಏರೋ ಇಂಡಿಯಾ ಕಾರ್ಯಕ್ರಮ, ಕ್ಷೇತ್ರದಲ್ಲಿ ಚುನಾವಣೆಗೆ ಸಜ್ಜುಗೊಳಿಸಬೇಕಾಗಿರುವ ಹಿನ್ನೆಲೆಯಲ್ಲಿ ಸೋಮವಾರದ ಅಧಿವೇಶನದಲ್ಲಿ ಉಭಯ ಸದನಗಳು ಬಹುತೇಕ ಖಾಲಿ ಖಾಲಿ… ಸೋಮವಾರ ಸಚಿವರು ಸೇರಿದಂತೆ ಎಲ್ಲ ಪಕ್ಷಗಳ ಸದಸ್ಯರ ಹಾಜರಾತಿ ತೀರಾ ಕಡಿಮೆ ಇತ್ತು. ಹೀಗಾಗಿ ಕಲಾಪ ಸಹ ಪೇಲವವಾಗಿತ್ತು. ಕಳೆದ ಶುಕ್ರವಾರ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರ ಭಾಷಣದ ವೇಳೆಯೇ ಪ್ರಮುಖ ಮುಖಂಡರು, ಶಾಸಕರು ಗೈರಾಗಿದ್ದರು. ಸೋಮವಾರ ಇನ್ನಷ್ಟು ಹೆಚ್ಚಿನ ಸಂಖ್ಯೆಯ ಗೈರು ಹಾಜರಾತಿ ಕಂಡುಬಂದಿತು.

ಏರೋ ಇಂಡಿಯಾ ಉದ್ಘಾಟನೆಗೆ ಪ್ರಧಾನಿ ಮೋದಿ ಆಗಮನದ ಕಾರಣ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕ ಸಚಿವರು ಆಗಮಿಸಿರಲಿಲ್ಲ. ಕಾಂಗ್ರೆಸ್ ಪಕ್ಷದ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್. ಜೆಡಿಎಸ್ನ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಕಾಂಗ್ರೆಸ್, ಜೆಡಿಎಸ್ ಸದಸ್ಯರೂ ಗೈರಾಗಿದ್ದರು. ವಿಧಾನಸಭೆ ಆರಂಭದ ವೇಳೆ ಆಡಳಿತಾರೂಢ ಪಕ್ಷದಿಂದ ಸುಮಾರು 25 ಶಾಸಕರು, ಪ್ರತಿಪಕ್ಷ ಕಾಂಗ್ರೆಸ್ ಮತ್ತು ಜೆಡಿಎಸ್ನಿಂದ ಸುಮಾರು 20 ಶಾಸಕರು, 7 ಸಚಿವರು ಮಾತ್ರ ಸದನದಲ್ಲಿ ಕಂಡು ಬಂದರು.
ಎಲ್ಲ ಪಕ್ಷದವರು ಗೈರು ಹಾಜರಾಗಿದ್ದರಿಂದ ಯಾರೂ ಕೂಡಾ ಆಕ್ಷೇಪ ವ್ಯಕ್ತಪಡಿಸದೆ ಕಲಾಪದಲ್ಲಿ ಪಾಲ್ಗೊಂಡಿದ್ದು ಮಾತ್ರ ವಿಶೇಷವಾಗಿತ್ತು. ಮಧ್ಯಾಹ್ನ ಸುಮಾರು 12 ಗಂಟೆಯ ನಂತರ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಕಲಾಪದಲ್ಲಿ ಭಾಗಿಯಾದರು. ಭೋಜನ ವಿರಾಮದ ನಂತರ ಶಾಸಕರು ಸದನದಲ್ಲಿ ಕಾಣಿಸಲಿಲ್ಲ. ಈ ವೇಳೆ ಕಾಂಗ್ರೆಸ್ ಸದಸ್ಯರ ಸಂಖ್ಯೆ ತುಸು ಕಡಿಮೆ ಇದ್ದ ಕಾರಣ ಸಚಿವ ಆರ್.ಅಶೋಕ್, ಸಿ.ಟಿ.ರವಿ ಅವರು ಕಾಂಗ್ರೆಸ್ ಸದಸ್ಯರಿಗೆ ಸ್ವಲ್ಪವೂ ಜನಪರ ಕಾಳಜಿ ಇಲ್ಲ, ಸದನಕ್ಕೆ ಬಂದು ಚರ್ಚಿಸುತ್ತಿಲ್ಲ. ಹೀಗೆ ಗೈರು ಹಾಜರಾದರೆ ಹೇಗೆ ಎಂದು ಟೀಕಿಸಿದರು.
ಗರಂ ಆದ ಸಭಾಪತಿ ಹೊರಟ್ಟಿ: ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಬೇಕಾದ ಸಚಿವರ ಬದಲಾಗಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಉತ್ತರಿಸಲಿದ್ದಾರೆ ಎಂದು ಸರ್ಕಾರದ ಮುಖ್ಯ ಸಚೇತಕ ವೈ.ಎ.ನಾರಾಯಣಸ್ವಾಮಿ ಅವರ ಮಾತಿಗೆ ಸಭಾಪತಿ ಬಸವರಾಜ ಹೊರಟ್ಟಿಕೊಂಚ ಗರಂ ಆಗಿ, ಟೇಕನ್ ಫಾರ್ ಗ್ರ್ಯಾಂಟೆಡ್ ಎಂದು ತಿಳಿದುಕೊಳ್ಳಬೇಡಿ ಎಂದು ಅಸಮಾಧಾನ ವ್ಯಕ್ತಪಡಿಸಿದ ಪ್ರಸಂಗ ನಡೆಯಿತು. ಜೆಡಿಎಸ್ ಸದಸ್ಯ ಎಸ್.ಎಲ್.ಬೋಜೇಗೌಡ ಅವರು ಪ್ರವಾಸೋದ್ಯಮ ಇಲಾಖೆ ಕುರಿತು ಕೇಳಿದ ಪ್ರಶ್ನೆಗೆ ಸಚಿವ ಅಶ್ವತ್ಥನಾರಾಯಣ ಉತ್ತರಿಸಲು ಎದ್ದು ನಿಂತಾಗ, ತಮ್ಮ ಪರವಾಗಿ ಯಾರು ಉತ್ತರಿಸುತ್ತಾರೆ ಎಂದು ಸಚಿವ ಆನಂದ ಸಿಂಗ್ ತಮಗೆ ಮಾಹಿತಿ ನೀಡಿಲ್ಲ.

